November 22, 2026

ಹೊನ್ನಾವರ: ಕೋಟೆಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜೃಂಭಣೆಯ ‘ಮಕ್ಕಳ ಹಬ್ಬ’

ಕನ್ನಡ ನಮ್ಮ ಉಸಿರಾಗಬೇಕು, ಗ್ರಾಮೀಣ ಶಾಲೆಗಳ ಉಳಿವಿಗೆ ಇಂತಹ ಕಾರ್ಯಕ್ರಮಗಳು ಮಾದರಿ: ತಾ.ಪಂ. ಇಒ ಪುಟ್ಟೇಗೌಡ ಅಭಿಮತ

ಹೊನ್ನಾವರ (ಉತ್ತರ ಕನ್ನಡ): “ಗ್ರಾಮೀಣ ಭಾಗದಲ್ಲಿ ವಿನೂತನ ಚಟುವಟಿಕೆಗಳ ಮೂಲಕ ತಾಲೂಕು ಹಾಗೂ ಜಿಲ್ಲೆಯ ಗಮನ ಸೆಳೆದಿರುವ ಹೊನ್ನಾವರದ ಕೋಟೆಬೈಲು ಸರ್ಕಾರಿ ಪ್ರೌಢಶಾಲೆಯ ಕನ್ನಡ ಪ್ರೇಮ ಮೆಚ್ಚುವಂತದ್ದು. ಕನ್ನಡ ನಮ್ಮ ಉಸಿರಾಗಬೇಕು ಮತ್ತು ಕನ್ನಡದ ಸೇವೆಯೇ ನಾಡ ಸೇವೆ” ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪುಟ್ಟೇಗೌಡ ಅಭಿಪ್ರಾಯಪಟ್ಟರು.

ಕೋಟೆಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ‘ಮಕ್ಕಳ ಹಬ್ಬ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಬಿ.ಎಸ್. ಭಜಂತ್ರಿ, “ಸರ್ಕಾರಿ ಶಾಲೆಗಳು ಜೀವನಕ್ಕೆ ಉಪಯುಕ್ತವಾದ ಅಕ್ಷರದ ಜೊತೆಗೆ ಬದುಕನ್ನು ರೂಪಿಸುವ ಮೌಲ್ಯಯುತ ಚಟುವಟಿಕೆಗಳನ್ನು ನೀಡುತ್ತಿವೆ. ಈ ಶಾಲೆಯ ಎಸ್‌ಡಿಎಂಸಿ (SDMC) ಹಾಗೂ ಶಿಕ್ಷಕರ ಪರಿಶ್ರಮ ತಾಲೂಕಿಗೆ ಮಾದರಿಯಾಗಿದೆ” ಎಂದರು.

ಜಿಲ್ಲಾ ಪಿಡಿಒ ಸಂಘದ ಅಧ್ಯಕ್ಷ ಗಿರೀಶ್ ನಾಯಕ ಮಾತನಾಡಿ, “ಅಜ್ಞಾನದ ಕತ್ತಲನ್ನು ಹೋಗಲಾಡಿಸುವುದೇ ಶಿಕ್ಷಣದ ಮೂಲ ಉದ್ದೇಶ. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ (SSLC) ಶೇ. 100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಈ ಸಂಸ್ಥೆ ಭರವಸೆ ಮೂಡಿಸಿದೆ” ಎಂದು ಶ್ಲಾಘಿಸಿದರು.

‘ಎಲ್ಲರೂ ಕಲಿಯೋಣ ಎಲ್ಲರೂ ಬೆಳೆಯೋಣ’ ಶೀರ್ಷಿಕೆ:

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ನಾಯ್ಕ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಗಣೇಶ್ ನಾಯ್ಕ, ಎಸ್‌ಡಿಎಂಸಿ ಸದಸ್ಯೆ ಸವಿತಾ ಹಳ್ಳೇರ ಹಾಗೂ ಸಿಆರ್‌ಪಿ (CRP) ರೋಹಿಣಿ ನಾಯ್ಕ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುರೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ಗಣೇಶ್ ಹೆಗಡೆ ಸ್ವಾಗತಿಸಿ, ರೋಹಿಣಿ ನಾಯ್ಕ ಕಾರ್ಯಕ್ರಮ ನಿರೂಪಿಸಿ, ತನುಜಾ ನಾಯ್ಕ ವಂದಿಸಿದರು. ಸಮಾರೋಪ ಕಾರ್ಯಕ್ರಮವನ್ನು ಮಾಧುರಿ ಭಟ್ ಮತ್ತು ಪರ್ಪೆತ್ ರೊಡ್ರಗಿಸ್ ನಿರ್ವಹಿಸಿದರು.

ಸುತ್ತಮುತ್ತಲಿನ 7 ಪ್ರಾಥಮಿಕ ಶಾಲೆಗಳ 33 ವಿದ್ಯಾರ್ಥಿಗಳು ‘ಮಕ್ಕಳ ಹಬ್ಬ’ದಲ್ಲಿ ಉತ್ಸಾಹದಿಂದ ಭಾಗವಹಿಸಿ ರಸಪ್ರಶ್ನೆ, ಕ್ರೀಡೆ, ಸಂವಾದ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಇದೇ ವೇಳೆ ನವೆಂಬರ್ 14, 2026ರಂದು ಜರುಗಿದ ‘ಮಕ್ಕಳ ಸಂತೆ’ ಕಾರ್ಯಕ್ರಮದ ವಿಶೇಷತೆಗಳ ಕುರಿತು ಮಾಹಿತಿ ನೀಡಲಾಯಿತು.

About The Author

error: Content is protected !!