November 22, 2026

ಅರೇಅಂಗಡಿ ಎಸ್‌.ಎಸ್‌ಮ್‌.ಕೆ.ಪಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಜೃಂಭಣೆಯ ‘ಮಾತೃ ಪಿತೃ ವಂದನಾ’ ಕಾರ್ಯಕ್ರಮ

ಪೋಷಕರ ಸಮ್ಮುಖದಲ್ಲಿ ನಡೆದ ಭಾವುಕ ಕ್ಷಣಗಳು; ಹೆತ್ತವರನ್ನು ಪೂಜಿಸುವುದೇ ಶ್ರೇಷ್ಠವೆಂದ ಅತಿಥಿಗಳು

ಅರೇಅಂಗಡಿ (ಹೊನ್ನಾವರ): ಇಲ್ಲಿನ ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ (ಎಸ್‌ಎಸ್‌ಎಸ್‌ಕೆಪಿ) ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪಾಲಕ-ಪೋಷಕರ ಉಪಸ್ಥಿತಿಯಲ್ಲಿ ‘ಮಾತೃ ಪಿತೃ ವಂದನಾ’ ಕಾರ್ಯಕ್ರಮವು ಅತ್ಯಂತ ವಿಜ್ರಂಭಣೆ ಹಾಗೂ ಭಾವನಾತ್ಮಕ ವಾತಾವರಣದಲ್ಲಿ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಬ್ರಹ್ಮಣ್ಯದ ಎಸ್‌ಆರ್‌ಬಿಎಸ್‌ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಾಗಪತಿ ಭಟ್ ಮಾತನಾಡಿ, “ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ ತಾಯಿಯನ್ನು ಪೂಜಿಸಬೇಕು” ಎಂದು ಹಿತನುಡಿಗಳನ್ನಾಡಿದರು. ಅಲ್ಲದೆ, “ಅಪ್ಪ ಅಮ್ಮನು ನೆಡಲಿ ಸಂಸ್ಕಾರ ಬೀಜ, ಗುರು ನೀರ ನೆರೆಯುತಿರೆ ಅರಳುವುದು ತೇಜ, ಮಗುವಿನೊಳಗಣ ಮೊಗ್ಗು ಅರಳಿ ನಿಲ್ಲುವುದು, ಬಾಳಿಗೆ ತಪಸ್ಸಿನ ಪರಿಮಳವ ಬೀರುವುದು” ಎಂಬ ಅರ್ಥಪೂರ್ಣ ಕವಿತೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮದಾಸ ಜೆ. ಆಚಾರಿ ಮಾತನಾಡಿ, “ಸದಾ ಒಳಿತನ್ನು ನಡೆಸಿ, ಕೆಟ್ಟದನ್ನು ದೂರವಿಡಿ; ಉಳಿದ ಫಲವನ್ನು ದೇವರಿಗೆ ಬಿಟ್ಟುಬಿಡಿ” ಎಂದು ಮೌಲ್ಯಯುತ ಜೀವನದ ಪಾಠ ಹೇಳಿದರು. ಇನ್ನೋರ್ವ ಅತಿಥಿ, ಶಾಲೆಯ ಕಾರ್ಯದರ್ಶಿ ಮನೋಜ್ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ನುಡಿಗಳನ್ನಾಡಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೈಲಾ ಹೆಗಡೆ ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು. ಪಾಲಕ-ಪೋಷಕರ ಸಮ್ಮುಖದಲ್ಲಿ ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ಪಾದಪೂಜೆ ನೆರವೇರಿಸಿ ನಮಸ್ಕರಿಸಿದ ದೃಶ್ಯಗಳು ಎಲ್ಲರ ಕಣ್ಣುಗಳಲ್ಲಿ ಆನಂದಬಾಷ್ಪ ಮೂಡಿಸಿದವು. ಅತಿಥಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಮಾತೃ ಪಿತೃ ವಂದನಾ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಸಂಪೂರ್ಣಗೊಂಡಿತು.

About The Author

error: Content is protected !!