ಬುಕ್ಕಿಂಗ್ ಮಾಡಿದ ನಾಲ್ಕೇ ಗಂಟೆಯೊಳಗೆ ಮನೆಗೆ ಗ್ಯಾಸ್ ಪೂರೈಕೆ; ಬಿಪಿಸಿಎಲ್ನ ವಿನೂತನ ಸೇವೆಗೆ ಚಾಲನೆ
ಭಟ್ಕಳ (ಉತ್ತರ ಕನ್ನಡ): ಅಡುಗೆ ಅನಿಲ (LPG) ವಿತರಣೆಯಲ್ಲಿ ಗ್ರಾಹಕರಿಗೆ ಎದುರಾಗುವ ವಿಳಂಬ ಹಾಗೂ ಇತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ವಿನೂತನ ಹೆಜ್ಜೆಯಿಟ್ಟಿದೆ. ತ್ವರಿತ ಪೂರೈಕೆ, ನಿಖರ ತೂಕ ಮತ್ತು ಸುಧಾರಿತ ಗ್ರಾಹಕ ಸೇವೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿರುವ 10 ಕೆ.ಜಿ. ಸಾಮರ್ಥ್ಯದ ಸ್ಮಾರ್ಟ್ ‘ಜಿಪ್ಲೈನ್’ (Zipline) ಗ್ಯಾಸ್ ಸಿಲಿಂಡರ್ ಸೇವೆಯನ್ನು ಭಟ್ಕಳದಲ್ಲಿ ಬುಧವಾರ ಮಾರುಕಟ್ಟೆಗೆ ಪರಿಚಯಿಸಲಾಯಿತು.

ನಗರದ ಮೂಕಾಂಬಿಕಾ ಗ್ಯಾಸ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಪಿಸಿಎಲ್ ಮಂಗಳೂರು ಪ್ರಾದೇಶಿಕ ವಿಭಾಗದ ಮುಖ್ಯಸ್ಥ ಸಂದೀಪ್ ಕುಮಾರ್ ರೈನಾ ಅವರು ನೂತನ ಸಿಲಿಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

“ಸಾಮಾನ್ಯ ಗ್ಯಾಸ್ ವಿತರಣಾ ಪದ್ಧತಿಗಿಂತ ಭಿನ್ನವಾಗಿ, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸೇವೆಯನ್ನು ಸರಳಗೊಳಿಸುವುದು ಈ ಯೋಜನೆಯ ಮುಖ್ಯ ಆಶಯವಾಗಿದೆ. ಗ್ಯಾಸ್ ಬುಕ್ಕಿಂಗ್ ಮಾಡಿದ ಕೇವಲ ನಾಲ್ಕು ಗಂಟೆಗಳ ಅವಧಿಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸುವ ವ್ಯವಸ್ಥೆ ಇದರ ಪ್ರಮುಖ ಆಕರ್ಷಣೆಯಾಗಿದೆ. ತೂಕ ಮತ್ತು ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ, ವಿತರಣಾ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ತರಲು ಈ ತಂತ್ರಜ್ಞಾನ ನೆರವಾಗಲಿದೆ” ಎಂದು ವಿವರಿಸಿದರು.
“ಇಂದಿನ ವೇಗದ ಜೀವನಶೈಲಿಯಲ್ಲಿ ಅಡುಗೆ ಅನಿಲದ ಸಮಯೋಚಿತ ಪೂರೈಕೆ ಅತ್ಯಗತ್ಯ. ಗ್ರಾಹಕರ ಕಾಯುವಿಕೆಯ ಸಮಯವನ್ನು ತಗ್ಗಿಸಿ, ಬುಕ್ಕಿಂಗ್ನಿಂದ ವಿತರಣೆಯವರೆಗಿನ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಬಿಪಿಸಿಎಲ್ನ ಗುರಿಯಾಗಿದೆ” ಎಂದು ಅವರು ಹೇಳಿದರು.
ಬಳಿಕ ಮೂಕಾಂಬಿಕಾ ಗ್ಯಾಸ್ ಏಜೆನ್ಸಿಯ ಪಾಲುದಾರ ದಿನಕರ ಕಿಣಿ ಹಾಗೂ ಮಂಕಿಯ ಸರ್ವೇಶ್ವರಿ ಗ್ಯಾಸ್ ಏಜೆನ್ಸಿಯ ಮಾಲಕಿ ರೇಷ್ಮಾ ಎಲ್. ಅವರು ಗ್ರಾಹಕರಿಗೆ ನೂತನ ಸಿಲಿಂಡರ್ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸುವ ಮೂಲಕ ಸೇವೆಗೆ ಅಧಿಕೃತ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅರ್ಬನ್ ಬ್ಯಾಂಕ್ ನಿರ್ದೇಶಕ ಪದ್ಮನಾಭ ಪೈ, ಬಿಪಿಸಿಎಲ್ ಅಧಿಕಾರಿ ಸೂರ್ಯಪ್ರಕಾಶ ರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮುರುಡೇಶ್ವರದ ನಾಗೇಶ ನಾಯ್ಕ ನೂತನ ಸಿಲಿಂಡರ್ ವ್ಯವಸ್ಥೆಯ ವಿಶೇಷತೆ ಹಾಗೂ ಗ್ರಾಹಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಹೊನ್ನಾವರದ ಬಿಂದು ಅವಧಾನಿ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಎಲ್. ವಂದನಾರ್ಪಣೆ ನೆರವೇರಿಸಿದರು.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ಜಾಲಿಯಲ್ಲಿ ಬೆಳಕೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಂಭ್ರಮ
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!