ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ – ಡಿ.ಬಿ. ನಾಯ್ಕ; ಸಂಶೋಧಕಿ ಭಾರತಿ ತಿಮ್ಮಪ್ಪ ನಾಯ್ಕಗೆ ಸನ್ಮಾನ
ಭಟ್ಕಳ (ಉತ್ತರ ಕನ್ನಡ): ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಜಾಲಿಯ ಸರ್ಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಆಯೋಜಿಸಿದ್ದ ಬೆಳಕೆ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸಂಭ್ರಮದಿಂದ ನೆರವೇರಿತು.

ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ – ಡಿ.ಬಿ. ನಾಯ್ಕ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ಹಾಗೂ ನಿವೃತ್ತ ಶಿಕ್ಷಕ ಡಿ.ಬಿ. ನಾಯ್ಕ, “ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಹೊರತರುವಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳ ಸೃಜನಶೀಲತೆ, ಕಲಾತ್ಮಕ ಅಭಿರುಚಿ ಹಾಗೂ ಸಾಮರ್ಥ್ಯ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಮಾತನಾಡಿ, “ಪ್ರತಿಭಾ ಕಾರಂಜಿ ಕೇವಲ ಸ್ಪರ್ಧೆಯಲ್ಲ; ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಭಾಷಾ ಕೌಶಲ, ಸೃಜನಶೀಲತೆ ಹಾಗೂ ಕಲಾಸಕ್ತಿಯನ್ನು ಬೆಳೆಸುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಬ್ಬವಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಆಶಯದಂತೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ” ಎಂದು ಹೇಳಿದರು.
ಶೇ.100 ಫಲಿತಾಂಶದ ಶ್ಲಾಘನೆ: ಜಾಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಾಂತರಾಮ ನಾಯ್ಕ ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣದ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಜಾಲಿ ಪ್ರೌಢಶಾಲೆ ಹಲವು ವರ್ಷಗಳಿಂದ ಶೇ.100ರಷ್ಟು ಫಲಿತಾಂಶ ದಾಖಲಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಪೂರಕವಾಗಿವೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದೇವಿದಾಸ ನಾಯ್ಕ ಮಾತನಾಡಿ, “ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಶಿಕ್ಷಣದ ಪ್ರಮುಖ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಮಹತ್ವದ ವೇದಿಕೆಯಾಗಿದೆ” ಎಂದರು.
ಹಳೆಯ ವಿದ್ಯಾರ್ಥಿನಿ ಸಂಶೋಧಕಿಗೆ ಗೌರವ: ಇದೇ ಸಂದರ್ಭದಲ್ಲಿ ಜಾಲಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಸಂಶೋಧಕಿ ಭಾರತಿ ತಿಮ್ಮಪ್ಪ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ದಯಾನಂದ ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ಎಂ.ಡಿ. ನಾಯ್ಕ, ಜಾಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಪ್ಪ ನಾಯ್ಕ, ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್‌ನ ವಸಂತ ನಾಯ್ಕ, ಉದ್ಯಮಿ ರವಿ ನಾಯ್ಕ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶಂಕರ ಗೊಂಡ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ ನಾಯ್ಕ, ಮುಖ್ಯಾಧ್ಯಾಪಕ ಯು.ಎ. ಲೋಹಾನಿ, ವಿಶ್ವಕರ್ಮ ನಿಗಮದ ಮಾಜಿ ಸದಸ್ಯ ದೇವಿದಾಸ ಆಚಾರ್ಯ, ಪ್ರತಿಭಾ ಕಾರಂಜಿ ತಾಲೂಕು ನೋಡಲ್ ಅಧಿಕಾರಿ ರಾಘವೇಂದ್ರ ಮಡಿವಾಳ ಹಾಗೂ ನಿವೃತ್ತ ಸರ್ಕಾರಿ ಸಿಬ್ಬಂದಿ ಮಾಸ್ತಿ ಗೊಂಡ ಉಪಸ್ಥಿತರಿದ್ದರು.
ಬೆಳಕೆ ವಲಯದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಗಾಯನ, ನೃತ್ಯ, ಭಾಷಣ, ಆಶುಭಾಷಣ, ಅಭಿನಯ, ಚಿತ್ರಕಲೆ ಹಾಗೂ ಕವನ ವಾಚನ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು. ಶಿಕ್ಷಕಿಯರಾದ ಮೋಹಿನಿ ಬಾನಾವಳಿಕರ್, ರಜನಿ ಶೆಟ್ಟಿ, ವೀಣಾಶ್ರೀ ಮಡಿವಾಳ ಹಾಗೂ ಜಾಲಿ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಸಹಕರಿಸಿದರು. ಎಸ್‌ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಖ್ಯಾಧ್ಯಾಪಕ ವಿನಾಯಕ ಅವಧಾನಿ ಸ್ವಾಗತಿಸಿದರು. ಶಿಕ್ಷಕ ಸಾಹಿತಿ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು. ತಿಮ್ಮಪ್ಪ ದೇವಡಿಗ ದಾನಿಗಳ ಪಟ್ಟಿ ವಾಚಿಸಿದರು, ಗಣೇಶ ಗೌಡ ವಂದಿಸಿದರು. ವಿಜೇತಾ, ಮೆಹೆಕ್, ಪ್ರಾರ್ಥನಾ, ಚಂದನಾ ಹಾಗೂ ಅಮೂಲ್ಯ ಸಂಗಡಿಗರು ಪ್ರಾರ್ಥಿಸಿದರು.

More Stories
ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಮಿಂಚು
ನ್ಯಾಯಾಲಯದ ವಾರಂಟ್ ಜಾರಿಗೊಳಿಸಲು ತೆರಳಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ!
ಗೊಂಡರಕೇರಿಯಲ್ಲಿ ಮಣ್ಣಿನ ಅಕ್ರಮ ಅಗೆಯುವಿಕೆ ಆರೋಪ: 200ಕ್ಕೂ ಹೆಚ್ಚು ಕುಟುಂಬಗಳಿಗೆ ಭೂಕುಸಿತದ ಭೀತಿ!