November 22, 2026

ಗೊಂಡರಕೇರಿಯಲ್ಲಿ ಮಣ್ಣಿನ ಅಕ್ರಮ ಅಗೆಯುವಿಕೆ ಆರೋಪ: 200ಕ್ಕೂ ಹೆಚ್ಚು ಕುಟುಂಬಗಳಿಗೆ ಭೂಕುಸಿತದ ಭೀತಿ!

ಕೃಷಿ ಭೂಮಿ ಸಮತಟ್ಟು ಮಾಡುವ ನೆಪದಲ್ಲಿ ಗುಡ್ಡಕ್ಕೆ ಕತ್ತರಿ – ಅರಣ್ಯ ಇಲಾಖೆ ಬೇಲಿ ನಾಶ, ಸಾರ್ವಜನಿಕ ಚರಂಡಿಗೂ ಕುತ್ತು; ತನಿಖೆಗೆ ಕರವೇ ಸ್ವಾಭಿಮಾನಿ ಬಣ ಆಗ್ರಹ

ಭಟ್ಕಳ: ಕೃಷಿ ಭೂಮಿ ಸಮತಟ್ಟು ಮಾಡುವ ನೆಪದಲ್ಲಿ ಖಾಸಗಿ ಜಮೀನಿನಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣಿನ ಅಗೆಯುವಿಕೆ ಹಾಗೂ ಸಾಗಾಟ ನಡೆಯುತ್ತಿದ್ದು, ಇದರಿಂದ ಗುಡ್ಡದ ಸ್ವರೂಪವೇ ಬದಲಾಗಿರುವುದಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರ ಬದುಕಿಗೂ ಆತಂಕ ಎದುರಾಗಿದೆ ಎಂಬ ಗಂಭೀರ ಆರೋಪ ಮಾವಿನಕುರ್ವ ವ್ಯಾಪ್ತಿಯ ಗೊಂಡರಕೇರಿಯಿಂದ ಕೇಳಿಬಂದಿದೆ.

ಈ ಅಕ್ರಮ ಚಟುವಟಿಕೆಗಳಿಂದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯಿದ್ದು, ಗುಡ್ಡದ ಕೆಳಭಾಗದಲ್ಲಿ ವಾಸಿಸುತ್ತಿರುವ 200ಕ್ಕೂ ಹೆಚ್ಚು ಕುಟುಂಬಗಳ ಜೀವ ಮತ್ತು ಆಸ್ತಿಪಾಸ್ತಿಗೆ ಅಪಾಯ ಎದುರಾಗುವ ಆತಂಕವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಆರೋಪಿಸಿದೆ.

ಈ ಕುರಿತು ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಭಟ್ಕಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಕೃಷಿ ಭೂಮಿಯನ್ನು ಸಮತಟ್ಟು ಮಾಡುವ ಉದ್ದೇಶದ ಹೆಸರಿನಲ್ಲಿ ನಡೆಯುತ್ತಿರುವ ಮಣ್ಣಿನ ಅಗೆಯುವಿಕೆ ಸಾಮಾನ್ಯ ಕಾಮಗಾರಿಯ ಮಿತಿಯನ್ನು ಮೀರಿದೆ ಎನ್ನಲಾಗಿದೆ. ಸುಮಾರು 30ರಿಂದ 40 ಅಡಿ ಆಳದವರೆಗೆ ಗುಡ್ಡವನ್ನು ಲಂಬವಾಗಿ ಕೊರೆದು, ಅಪಾರ ಪ್ರಮಾಣದ ಮಣ್ಣನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೇರೆಡೆಗೆ ಸಾಗಿಸಲಾಗುತ್ತಿದೆ. ಇದರಿಂದ ನೈಸರ್ಗಿಕ ಗುಡ್ಡದ ರಚನೆಯೇ ಸಂಪೂರ್ಣ ಬದಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇದರೊಂದಿಗೆ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯದೆ ಗುಡ್ಡದ ಮೇಲ್ಭಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ. ಅರಣ್ಯ ಇಲಾಖೆ ಅಳವಡಿಸಿದ್ದ ಬೇಲಿಯನ್ನು ಕೂಡ ನಾಶಪಡಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಬೋರ್‌ವೆಲ್ ಕೊರೆಯಲಾಗಿದ್ದು, ಸಾರ್ವಜನಿಕ ರಸ್ತೆಯ ಪಕ್ಕದಲ್ಲಿದ್ದ ಚರಂಡಿಯನ್ನು ಖಾಸಗಿ ಹಿತಾಸಕ್ತಿಗಾಗಿ ಮುಚ್ಚಲಾಗಿದೆ ಎಂಬ ದೂರನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

200ಕ್ಕೂ ಹೆಚ್ಚು ಕುಟುಂಬಗಳ ಜೀವಕ್ಕೆ ಅಪಾಯದ ಆತಂಕ!

ಮಳೆಗಾಲದಲ್ಲಿ ಈಗಾಗಲೇ ಈ ಭಾಗದಲ್ಲಿ ಭೂಕುಸಿತದಂತಹ ಘಟನೆಗಳು ಸಂಭವಿಸಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಇದೇ ರೀತಿ ಗುಡ್ಡವನ್ನು ಆಳವಾಗಿ ಅಗೆಯುತ್ತಾ ಹೋದರೆ ಮುಂದಿನ ದಿನಗಳಲ್ಲಿ ಮಣ್ಣಿನ ಸವಕಳಿ ಹೆಚ್ಚಾಗಿ ಗುಡ್ಡ ಕುಸಿಯುವ ಅಪಾಯವಿದೆ. ಗುಡ್ಡದ ಕೆಳಭಾಗದಲ್ಲಿ ವಾಸಿಸುತ್ತಿರುವ 200ಕ್ಕೂ ಹೆಚ್ಚು ಕುಟುಂಬಗಳು ಇಂತಹ ಅನಾಹುತಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂಬುದು ಸ್ಥಳೀಯರ ಆತಂಕವಾಗಿದೆ.

ಕೃಷಿ ಭೂಮಿ, ಕೆರೆಗಳಿಗೂ ಮಣ್ಣಿನ ಕಂಟಕ!

ಗುಡ್ಡದ ಮೇಲ್ಭಾಗದಲ್ಲಿ ನಡೆಯುತ್ತಿರುವ ಅಗೆಯುವಿಕೆಯ ಪರಿಣಾಮ ಕೆಳಭಾಗದಲ್ಲಿರುವ ಭತ್ತದ ಗದ್ದೆಗಳು, ಸಾರ್ವಜನಿಕ ಕೆರೆಗಳು ಹಾಗೂ ತೋಟಗಳಿಗೆ ಹಾನಿಯಾಗುತ್ತಿದೆ ಎನ್ನಲಾಗಿದೆ. ಮಳೆನೀರಿನೊಂದಿಗೆ ಕೆಂಪು ಮಣ್ಣು ಕೊಚ್ಚಿಕೊಂಡು ಬಂದು ಕೃಷಿ ಭೂಮಿ ಮತ್ತು ಜಲಮೂಲಗಳನ್ನು ಸೇರುತ್ತಿದ್ದು, ಫಲವತ್ತಾದ ಗದ್ದೆಗಳು ಕೃಷಿಗೆ ಯೋಗ್ಯವಲ್ಲದ ಸ್ಥಿತಿಗೆ ತಲುಪುವ ಭೀತಿ ಎದುರಾಗಿದೆ. ಕೆರೆಗಳಲ್ಲಿ ಹೂಳು ತುಂಬಿ ಜಲಸಂಗ್ರಹ ಸಾಮರ್ಥ್ಯ ಕುಸಿಯುವ ಜೊತೆಗೆ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟದ ಮೇಲೂ ದುಷ್ಪರಿಣಾಮ ಉಂಟಾಗಬಹುದು ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಮೌನವಾಗಿರಬಾರದು: ಕರವೇ ಆಗ್ರಹ

ಕೃಷಿ ಭೂಮಿ ಸಮತಟ್ಟು ಮಾಡುವ ಹೆಸರಿನಲ್ಲಿ ನಡೆಯುತ್ತಿರುವ ಮಣ್ಣಿನ ಅಗೆಯುವಿಕೆಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಸ್ಥಳಕ್ಕೆ ಭೇಟಿ ನೀಡಿ ಅಗೆಯುವಿಕೆಯ ಪ್ರಮಾಣ, ಮಣ್ಣಿನ ಸಾಗಾಟದ ಕಾನೂನುಬದ್ಧತೆ, ಅರಣ್ಯ ಪ್ರದೇಶಕ್ಕೆ ಉಂಟಾಗಿರುವ ಹಾನಿ ಹಾಗೂ ಸಾರ್ವಜನಿಕರ ಸುರಕ್ಷತೆಯ ಕುರಿತು ಸಮಗ್ರ ತನಿಖೆ ನಡೆಸಬೇಕು.

ಯಾವುದೇ ಅನಾಹುತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು ಮುನ್ನೆಚ್ಚರಿಕೆ ವಹಿಸಿ, ಅಕ್ರಮವೆಂದು ದೃಢಪಟ್ಟಲ್ಲಿ ಮಣ್ಣಿನ ಅಗೆಯುವಿಕೆ ಮತ್ತು ಸಾಗಾಟವನ್ನು ತಕ್ಷಣ ಸ್ಥಗಿತಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಒತ್ತಾಯಿಸಿದೆ.

About The Author

error: Content is protected !!