November 23, 2026

ಆನಂತವಾಡಿ ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ರೈಲಿನಿಂದ ಬಿದ್ದು ಸಾವು ಶಂಕೆ

ಬಿಹಾರ ಮೂಲದ ಪ್ರಯಾಣಿಕನಾಗಿರುವ ಸಾಧ್ಯತೆ; ಜೇಬಿನಲ್ಲಿ ಎರಡು ರೈಲು ಟಿಕೆಟ್ ಹಾಗೂ ಮೊಬೈಲ್ ಫೋನ್ ಪತ್ತೆ

ಭಟ್ಕಳ (ಉತ್ತರ ಕನ್ನಡ): ತಾಲೂಕಿನ ಆನಂತವಾಡಿ ಸಮೀಪದ ರೈಲ್ವೆ ಹಳಿಯ ಬಳಿ ಸುಮಾರು 35ರಿಂದ 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ರೈಲ್ವೆ ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ವ್ಯಕ್ತಿ ಮುಂಬೈನಿಂದ ಮಂಗಳೂರಿಗೆ ಸಂಚರಿಸುವ ಸಿಎಸ್‌ಟಿ ಎಕ್ಸ್‌ಪ್ರೆಸ್ ರೈಲಿನ ಕೊನೆಯ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಸುಮಾರು 11.15ರ ಸುಮಾರಿಗೆ ರೈಲು ಮುರ್ಡೇಶ್ವರದತ್ತ ಸಾಗುತ್ತಿದ್ದಾಗ ಆನಂತವಾಡಿ ಬಳಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಟಿಕೆಟ್‌ನಿಂದ ಬಿಹಾರ ಮೂಲದ ಶಂಕೆ: ಪರಿಶೀಲನೆಯ ವೇಳೆ ಮೃತರ ಜೇಬಿನಲ್ಲಿ ಎರಡು ಸಾಮಾನ್ಯ (ಜನರಲ್) ರೈಲು ಟಿಕೆಟ್‌ಗಳು ಹಾಗೂ ಒಂದು ಮೊಬೈಲ್ ಫೋನ್ ಪತ್ತೆಯಾಗಿವೆ. ಈ ಕುರಿತು ಮಾಹಿತಿ ನೀಡಿರುವ ಮುರ್ಡೇಶ್ವರ ಭಾಗದ ಸಾಮಾಜಿಕ ಕಾರ್ಯಕರ್ತ ಝಾಕಿರ್ ಕಟಿಂಗೇರಿ, ಪತ್ತೆಯಾದ ಟಿಕೆಟ್‌ಗಳಲ್ಲಿ ಒಂದು ಬಿಹಾರದಿಂದ ಮುಂಬೈಗೆ ಹಾಗೂ ಮತ್ತೊಂದು ಮುಂಬೈನಿಂದ ಕುಂದಾಪುರಕ್ಕೆ ಪ್ರಯಾಣಿಸಿರುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದ್ದಾರೆ. ಈ ಆಧಾರದ ಮೇಲೆ ಮೃತ ವ್ಯಕ್ತಿ ಬಿಹಾರ ಮೂಲದವರಾಗಿರಬಹುದು ಎಂದು ಶಂಕಿಸಲಾಗಿದೆ. ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ತಕ್ಷಣಕ್ಕೆ ಮೃತರ ಹೆಸರು ಮತ್ತು ವಿಳಾಸ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಪ್ರಾಥಮಿಕ ಅಂದಾಜಿನಂತೆ, ಬೋಗಿಯ ಬಾಗಿಲ ಬಳಿ ನಿಂತಿದ್ದ ಪ್ರಯಾಣಿಕ ರೈಲಿನಲ್ಲಾದ ಹಠಾತ್ ಜರ್ಕ್‌ನಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿರಬಹುದು. ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದೆ.

ಮೃತದೇಹವನ್ನು ಸದ್ಯ ಹೊನ್ನಾವರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಗುರುತು ಪತ್ತೆಹಚ್ಚಲು ಹಾಗೂ ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

error: Content is protected !!