November 23, 2026

ರಾಜ್ಯದಲ್ಲಿ ಪ್ರತ್ಯೇಕ ‘ಪುರುಷರ ಆಯೋಗ’ ಸ್ಥಾಪನೆಗೆ ಆಗ್ರಹ; ಸರ್ಕಾರಕ್ಕೆ 10 ಬೇಡಿಕೆಗಳ ಮಂಡನೆ

ಪುರುಷರಿಗೂ ಸಮಾನ ನ್ಯಾಯ, ಗೌರವ ಹಾಗೂ ಕಾನೂನು ರಕ್ಷಣೆ ಸಿಗಲಿ – ಆನಂದ್ ಸಿ. ತಿರುಮಲ; ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಕೆ ಅಭಿಯಾನ

ಮಂಡ್ಯ: ಅಂತರರಾಷ್ಟ್ರೀಯ ಪುರುಷರ ದಿನಾಚರಣೆ-2026ರ ಅಂಗವಾಗಿ ಕರ್ನಾಟಕ ರಾಜ್ಯ ಪುರುಷರ ಕಲ್ಯಾಣ ಮತ್ತು ರಕ್ಷಣಾ ಸಮಿತಿ (ರಿ.) ವತಿಯಿಂದ ಮಂಡ್ಯದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯದಲ್ಲಿ ಪ್ರತ್ಯೇಕ ‘ಪುರುಷರ ಆಯೋಗ’ ಹಾಗೂ ‘ಪುರುಷರ ಕಲ್ಯಾಣ ಮಂಡಳಿ’ ಸ್ಥಾಪನೆ ಸೇರಿದಂತೆ ಹತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.

ಮೌನವಾಗಿ ನೋವು ಅನುಭವಿಸುತ್ತಿರುವ ಪುರುಷರಿಗೆ ನ್ಯಾಯ ಸಿಗಲಿ – ಆನಂದ್ ಸಿ. ತಿರುಮಲ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಆನಂದ್ ಸಿ. ತಿರುಮಲ, “ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಹಾಗೂ ಕಾನೂನು ಸಂಬಂಧಿತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲು ಕರ್ನಾಟಕ ರಾಜ್ಯ ಪುರುಷರ ಆಯೋಗ ಸ್ಥಾಪನೆಯಾಗಬೇಕು. ಕುಟುಂಬದ ಜವಾಬ್ದಾರಿಗಳನ್ನು ಹೊತ್ತು ದುಡಿಯುವ ಅನೇಕ ಪುರುಷರು ತಮ್ಮ ನೋವುಗಳನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೆ ಮೌನವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದು ಮಹಿಳೆಯರ ವಿರುದ್ಧದ ಹೋರಾಟವಲ್ಲ; ಬದಲಾಗಿ ಸಮಾಜದಲ್ಲಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸುವ ಮಾನವೀಯ ಹೋರಾಟವಾಗಿದೆ” ಎಂದು ಸ್ಪಷ್ಟಪಡಿಸಿದರು.

ಮಾನಸಿಕ ಆರೋಗ್ಯ ರಕ್ಷಣೆಗೆ ವಿಶೇಷ ಯೋಜನೆ ಅಗತ್ಯ: ಚಿಂತಕ ಹಾಗೂ ಸಮಾಜಸೇವಕ ಸುರೇಶ್ ರಂಗೇಗೌಡ ಮಾತನಾಡಿ, “ಉದ್ಯೋಗ, ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ ಹಾಗೂ ಸಾಮಾಜಿಕ ಒತ್ತಡಗಳಿಂದ ಅನೇಕ ಪುರುಷರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ತಮ್ಮ ನೋವುಗಳನ್ನು ಹೊರಹಾಕಲು ಸೂಕ್ತ ವೇದಿಕೆ ಇಲ್ಲದೆ ತೊಳಲಾಡುತ್ತಿದ್ದಾರೆ. ಪುರುಷರ ಮಾನಸಿಕ ಆರೋಗ್ಯ ರಕ್ಷಣೆ, ಆತ್ಮಹತ್ಯೆ ತಡೆ ಹಾಗೂ ಕುಟುಂಬ ಸಮಾಲೋಚನೆಗಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು” ಎಂದು ಆಗ್ರಹಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮನಸ್ವಿತ್ ಮಾತನಾಡಿ, “ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಸುಳ್ಳು ಆರೋಪಗಳು ಮತ್ತು ಕೌಟುಂಬಿಕ ಕಲಹಗಳಿಂದ ನಿರಪರಾಧಿಗಳಿಗೆ ಅನ್ಯಾಯವಾಗಬಾರದು. ಸಂಕಷ್ಟದಲ್ಲಿರುವ ಪುರುಷರಿಗೆ ಉಚಿತ ಕಾನೂನು ನೆರವು ದೊರೆಯುವಂತಾಗಬೇಕು ಹಾಗೂ ತಂದೆಯರ ಮಕ್ಕಳ ಪಾಲನೆ ಮತ್ತು ಪೋಷಣೆಯ ಹಕ್ಕುಗಳನ್ನು ನ್ಯಾಯಯುತವಾಗಿ ಪರಿಗಣಿಸಬೇಕು” ಎಂದರು.

ಸರ್ಕಾರದ ಮುಂದಿಟ್ಟಿರುವ 10 ಪ್ರಮುಖ ಬೇಡಿಕೆಗಳು:

  1. ಕರ್ನಾಟಕ ರಾಜ್ಯ ಪುರುಷರ ಆಯೋಗ ಸ್ಥಾಪನೆ.
  2. ಪುರುಷರ ಕಲ್ಯಾಣ ಮತ್ತು ರಕ್ಷಣಾ ಮಂಡಳಿ ರಚನೆ.
  3. ಪುರುಷರ ಮೇಲಿನ ದೌರ್ಜನ್ಯ, ಬೆದರಿಕೆ ಮತ್ತು ಮಾನಸಿಕ ಕಿರುಕುಳ ತಡೆಗೆ ಸೂಕ್ತ ಕಾನೂನು ಕ್ರಮ.
  4. ಸಂಕಷ್ಟದಲ್ಲಿರುವ ಪುರುಷರಿಗೆ ಉಚಿತ ಕಾನೂನು ನೆರವು.
  5. ಪುರುಷರ ಮಾನಸಿಕ ಆರೋಗ್ಯಕ್ಕಾಗಿ ವಿಶೇಷ ಸಮಾಲೋಚನಾ ಕೇಂದ್ರಗಳ ಸ್ಥಾಪನೆ.
  6. ಪುರುಷರ ಆತ್ಮಹತ್ಯೆ ತಡೆಗೆ ವಿಶೇಷ ಸಹಾಯವಾಣಿ ಆರಂಭ.
  7. ತಂದೆಯರ ಮಕ್ಕಳ ಪಾಲನೆ ಮತ್ತು ಪೋಷಣೆಯ ಹಕ್ಕುಗಳಿಗೆ ನ್ಯಾಯಯುತ ರಕ್ಷಣೆ.
  8. ಸುಳ್ಳು ಆರೋಪಗಳು ಮತ್ತು ಕಾನೂನಿನ ದುರುಪಯೋಗದಿಂದ ನಿರಪರಾಧಿಗಳಿಗೆ ತೊಂದರೆಯಾಗದಂತೆ ಕ್ರಮ.
  9. ರೈತರು, ಕಾರ್ಮಿಕರು, ನಿರುದ್ಯೋಗಿಗಳು ಮತ್ತು ಹಿರಿಯ ಪುರುಷರಿಗೆ ವಿಶೇಷ ಕಲ್ಯಾಣ ಯೋಜನೆಗಳು.
  10. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪುರುಷರ ಹಕ್ಕುಗಳು, ಆರೋಗ್ಯ ಮತ್ತು ಸುರಕ್ಷತೆ ಕುರಿತು ಜಾಗೃತಿ ಅಭಿಯಾನ.

ಮಹಿಳೆಯರ ಹಕ್ಕುಗಳು ಮತ್ತು ಸಬಲೀಕರಣಕ್ಕೆ ಸಮಿತಿಯ ಸಂಪೂರ್ಣ ಬೆಂಬಲವಿದ್ದು, ಮಹಿಳೆಯರಂತೆಯೇ ಪುರುಷರಿಗೂ ಸಮಾನ ಗೌರವ ಮತ್ತು ರಕ್ಷಣೆ ಸಿಗಬೇಕು. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಸ್ವರ್ಣ ಕೃಷ್ಣ ಎಸ್.ಎಂ., ಚೈತನ್ಯ ಎನ್.ಸಿ. ಗೌಡ, ಅಬ್ದುಲ್ ಮಾಲೀಕ್ ಹಾಗೂ ಗುರು ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!