ರೈಲ್ವೆ, ಬಸ್ ನಿಲ್ದಾಣ ಹಾಗೂ ಬಂದರ್ ಲೈಟ್ಹೌಸ್ನಲ್ಲಿ ಭದ್ರತಾ ಪರಿಶೀಲನೆ; ‘ಅಣಸಿ’ ಮತ್ತು ‘ಸುಫಾ’ ಶ್ವಾನಗಳಿಂದ ಶೋಧ ಕಾರ್ಯ
ಭಟ್ಕಳ (ಉತ್ತರ ಕನ್ನಡ): ಕರಾವಳಿ ಪ್ರದೇಶಗಳ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ವಿವಿಧ ಭದ್ರತಾ ಪಡೆಗಳ ಸನ್ನದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಸಿ. ವಿಜಿಲ್-26’ (Sea Vigil-26) ಅಣಕು ಕಾರ್ಯಾಚರಣೆಯ ಅಂಗವಾಗಿ ಬುಧವಾರ ಭಟ್ಕಳದ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ ನಡೆಸಲಾಯಿತು.

ಭಟ್ಕಳ ರೈಲ್ವೆ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ ಹಾಗೂ ಬಂದರ್ ಲೈಟ್ಹೌಸ್ ಸೇರಿದಂತೆ ಜನನಿಬಿಡ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಅವಲೋಕಿಸಿದರು. ಈ ವೇಳೆ ಬಾಂಬ್ ಪತ್ತೆ ಶ್ವಾನ ‘ಅಣಸಿ’ ಹಾಗೂ ಮಾದಕವಸ್ತು ಪತ್ತೆ ಶ್ವಾನ ‘ಸುಫಾ’ಗಳನ್ನು ಬಳಸಿಕೊಂಡು ಅನುಮಾನಾಸ್ಪದ ವಸ್ತುಗಳು ಹಾಗೂ ಮಾದಕವಸ್ತುಗಳ ಪತ್ತೆಗಾಗಿ ಕೂಲಂಕಷ ತಪಾಸಣೆ ನಡೆಸಲಾಯಿತು.


36 ಗಂಟೆಗಳ ಸುದೀರ್ಘ ಕಾರ್ಯಾಚರಣೆ: ನವೆಂಬರ್ 25ರ ಬೆಳಿಗ್ಗೆ 8 ಗಂಟೆಯಿಂದ ನವೆಂಬರ್ 26ರ ರಾತ್ರಿ 8 ಗಂಟೆಯವರೆಗೆ ಒಟ್ಟು 36 ಗಂಟೆಗಳ ಕಾಲ ಈ ಅಣಕು ಕಾರ್ಯಾಚರಣೆ ನಡೆಯಲಿದೆ. ಕರಾವಳಿ ಭಾಗದ ಸೂಕ್ಷ್ಮ ಕೇಂದ್ರಗಳು, ಬಂದರುಗಳು, ಲೈಟ್ಹೌಸ್ಗಳು ಹಾಗೂ ರೇಡಾರ್ ಕೇಂದ್ರಗಳ ಭದ್ರತಾ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ.
ಜಿಲ್ಲಾ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ (ಸಿಎಸ್ಪಿ) ಹಾಗೂ ವಿವಿಧ ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ವಿವಿಧ ಇಲಾಖೆಗಳ ನಡುವಿನ ಸಮನ್ವಯ, ತಕ್ಷಣದ ಸ್ಪಂದನೆ ಹಾಗೂ ಕಾರ್ಯಾಚರಣಾ ಸಾಮರ್ಥ್ಯವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ಈ ಅಣಕು ಪ್ರದರ್ಶನ ಮಹತ್ವ ಪಡೆದಿದೆ.
ಈ ಸಂದರ್ಭದಲ್ಲಿ ಭಟ್ಕಳ ಡಿವೈಎಸ್ಪಿ ಗಿರೀಶ್, ಸಿಪಿಐ ದಿವಾಕರ ಪಿ.ಎಂ. ಹಾಗೂ ಪಿಎಸ್ಐ ನವೀನ ನಾಯ್ಕ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ತಂಡದ ನಾಯಕ ಆನಂದ ನಾಯಕ ನೇತೃತ್ವದಲ್ಲಿ ಸಿಬ್ಬಂದಿಯಾದ ಸಂತೋಷ ನಾಯಕ, ಶೇಕು ಪೂಜಾರಿ, ಮಹಾಬಲು ಗೌಡ, ವಿದ್ಯಾಧರ ಗೌಡ, ಶುಭಂ ಹಾಗೂ ಜಗನ್ನಾಥ ನಾಯ್ಕ ತಪಾಸಣಾ ಕಾರ್ಯದಲ್ಲಿ ಭಾಗವಹಿಸಿದ್ದರು.

More Stories
ಭಟ್ಕಳ: ಕಂದಾಯ ನೌಕರರ ಸಂಘದ ತಾಲೂಕು ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ
ಶಿರಾಲಿ ಮೂಲದ ಡಾ. ಸಚಿನ್ ಸದಾಶಿವ ಭಟ್ಟ ಅವರಿಗೆ ಪ್ರತಿಷ್ಠಿತ ‘ಎಲಿವೇಟ್-2026’ ಪ್ರಶಸ್ತಿ
ಶ್ರೀ ರಾಮಚಂದ್ರಾಪುರ ಮಠದ ‘ಗೋ ಸಮ್ಮಾನ ರಥ ಯಾತ್ರೆ’ಗೆ ಭವ್ಯ ಸ್ವಾಗತ