November 26, 2026

ರೇಷನ್ ವಿತರಣೆಯ ಅವಧಿ ಅಂತ್ಯದ ಹಂತದಲ್ಲಿದ್ದರೂ ಸರ್ವರ್ ಸ್ಲೋ; ಫಲಾನುಭವಿಗಳ ಪರದಾಟ

ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ವೃದ್ಧರು, ಮಹಿಳೆಯರು, ಕೂಲಿ ಕಾರ್ಮಿಕರ ಹೈರಾಣು; ಸಮಸ್ಯೆ ಬಗೆಹರಿಸಿ ಅವಧಿಯೊಳಗೆ ಪಡಿತರ ನೀಡಲು ಮಹೇಶ್ ಎಮ್. ಶರ್ಮಾ ಆಗ್ರಹ

ಅಥಣಿ (ಬೆಳಗಾವಿ): ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ತೀವ್ರ ನಿಧಾನಗತಿಯಲ್ಲಿ (ಸ್ಲೋ) ಕಾರ್ಯನಿರ್ವಹಿಸುತ್ತಿರುವುದರಿಂದ ಪಡಿತರ ವಿತರಣೆಗೆ ಅಡ್ಡಿಯಾಗಿದ್ದು, ರೇಷನ್ ಪಡೆಯಲು ಸಾರ್ವಜನಿಕರು ಗಂಟೆಗಟ್ಟಲೆ ಕಾದು ಕುಳಿತು ಪರದಾಡುವಂತಾಗಿದೆ. ಅದರಲ್ಲೂ ಪ್ರಸಕ್ತ ತಿಂಗಳ ರೇಷನ್ ವಿತರಣೆಯ ಅವಧಿ ಮುಗಿಯುವ ಹಂತಕ್ಕೆ ಬಂದಿರುವುದರಿಂದ ಬಡ ಫಲಾನುಭವಿಗಳಲ್ಲಿ ತೀವ್ರ ಆತಂಕ ಮೂಡಿದೆ.

ಬೆಳಗ್ಗೆಯಿಂದಲೇ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಚೀಟಿ ಹಿಡಿದು ಕಾದು ಕುಳಿತುಕೊಳ್ಳುತ್ತಿರುವ ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಸರ್ವರ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಆನ್‌ಲೈನ್ ಹಾಗೂ ಬಯೋಮೆಟ್ರಿಕ್ ಪ್ರಕ್ರಿಯೆ ನಿಧಾನವಾಗಿರುವ ಕಾರಣ ಒಬ್ಬೊಬ್ಬರಿಗೆ ಪಡಿತರ ನೀಡಲು ಹೆಚ್ಚು ಸಮಯ ಹಿಡಿಯುತ್ತಿದ್ದು, ಸರತಿ ಸಾಲಿನಲ್ಲಿ ನಿಂತ ಜನರು ದಿನವಿಡೀ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರೇಷನ್ ವಿತರಣೆಯ ಅವಧಿ ಅಂತ್ಯದ ಹಂತದಲ್ಲಿದ್ದರೂ ಸಮರ್ಪಕವಾಗಿ ವಿತರಣೆಯಾಗದಿರುವುದು ಬಡ ಕುಟುಂಬಗಳಿಗೆ ದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ.

ಅವಧಿ ಮೀರುವ ಮುನ್ನವೇ ಪಡಿತರ ತಲುಪಿಸಿ – ಮಹೇಶ್ ಎಮ್. ಶರ್ಮಾ ಒತ್ತಾಯ: ಈ ಕುರಿತು ಮಾಧ್ಯಮಗಳ ಮೂಲಕ ಸರ್ಕಾರವನ್ನು ಒತ್ತಾಯಿಸಿರುವ ಕರ್ನಾಟಕ SC-ST ಮಹಿಳಾ ಸಬಲೀಕರಣ ಹೋರಾಟ ಸಮಿತಿ (ರಿ.), ಅಥಣಿ ಇದರ ರಾಜ್ಯ ಮಾಧ್ಯಮ ವಕ್ತಾರ ಮಹೇಶ್ ಎಮ್. ಶರ್ಮಾ, “ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಬಡ ಜನರು, ಮಹಿಳೆಯರು ಮತ್ತು ವೃದ್ಧರು ರೇಷನ್ ಪಡೆಯಲು ಗಂಟೆಗಟ್ಟಲೆ ಕಾದು ಪರದಾಡುತ್ತಿದ್ದಾರೆ. ಅದರಲ್ಲೂ ರೇಷನ್ ಕೊಡುವ ಅವಧಿ ಮುಗಿಯುವ ಹಂತದಲ್ಲಿದ್ದರೂ ಸರ್ವರ್ ಅತ್ಯಂತ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದೆ. ಬೆಳಗ್ಗೆಯಿಂದಲೇ ಕಾದು ಕುಳಿತರೂ ಸಮಯಕ್ಕೆ ಸರಿಯಾಗಿ ರೇಷನ್ ಸಿಗದೆ ಜನರು ಕಂಗಾಲಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಸರ್ಕಾರ ಹಾಗೂ ಸಂಬಂಧಪಟ್ಟ ಆಹಾರ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸರ್ವರ್ ದೋಷವನ್ನು ಸರಿಪಡಿಸಬೇಕು ಮತ್ತು ಅವಧಿ ಮೀರುವ ಮುನ್ನವೇ ಎಲ್ಲ ಫಲಾನುಭವಿಗಳಿಗೆ ರೇಷನ್ ತಲುಪುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇನ್ನಾದರೂ ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು, ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಮಹೇಶ್ ಎಮ್. ಶರ್ಮಾ ಮನವಿ ಮಾಡಿದ್ದಾರೆ.

About The Author

error: Content is protected !!