April 15, 2026

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರ ಅಭಿಮಾನ ಅಗತ್ಯ: ಶಾಸಕ ದಿನಕರ ಶೆಟ್ಟಿ



ಹೊನ್ನಾವರ: ಶಿಕ್ಷಣದ ಬಗ್ಗೆ ಅಭಿಮಾನ ಪ್ರತಿಯೊಬ್ಬ ಸಾರ್ವಜನಿಕರಲ್ಲಿ ಮೂಡಿದಾಗ ಮಾತ್ರ ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.


ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಣಗುಣಿ ರಾಯಲಕೇರಿಯ 125ನೇ ವರ್ಷದ ರಜತ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಶಿಕ್ಷಣ ಇಲಾಖೆ ಸಹಕಾರ ನೀಡುತ್ತಿದ್ದು, ಸರ್ಕಾರವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ಸಮವಸ್ತ್ರ ವಿತರಣೆ ಆರಂಭವಾಗಿದ್ದು, ನಂತರ ಬಿಸಿಯೂಟ, ಪಠ್ಯಪುಸ್ತಕ ಸೇರಿದಂತೆ ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ ಎಂದು ಅವರು ಹೇಳಿದರು. ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪ್ರಮುಖ ಜವಾಬ್ದಾರಿ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ “ಬಾಲ ಬೆಳಕು” ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ತಾ.ಪಂ. ಆಡಳಿತಾಧಿಕಾರಿ ಎನ್.ಆರ್. ಹೆಗಡೆ ಮಾತನಾಡಿ, ಈ ಶಾಲೆ ಇಲಾಖೆಯ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದ್ದು, ಶತಮಾನೋತ್ಸವ ರಜತ ಸಂಭ್ರಮವನ್ನು ಆಚರಿಸುತ್ತಿರುವುದು ವಿಶೇಷ ಎಂದು ಹೇಳಿದರು. ರಾಜ್ಯ ಶಿಕ್ಷಣ ನೀತಿ ಜಾರಿಗೆ ಬಂದು, ದ್ವಿಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮುಂದಿನ ಜೂನ್‌ನಿಂದ ರಾಜ್ಯದ 15 ಜಿಲ್ಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಬಿಇಒ ವಿನಾಯಕ ಅವಧಾನಿ ಮಾತನಾಡಿ, ಈ ಭಾಗದ ಜನರು ಸದ್ಗುಣಸಂಪನ್ನರಾಗಿದ್ದು, ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುತ್ತಿರುವುದು ಶ್ಲಾಘನೀಯ. ಯಾವುದೇ ಆಂಗ್ಲ ಮಾಧ್ಯಮ ಶಾಲೆಗೆ ಕೊರತೆ ಇಲ್ಲದಂತೆ ಈ ಶಾಲೆಯು ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು, ಸ್ಥಳದಾನಿಗಳು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ದೇವಿದಾಸ ಮಡಿವಾಳ, ಕ್ಷೇತ್ರ ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಸಹನಾಬಾನು ಪಠಾಣ ಸೇರಿದಂತೆ ಹಲವರು ಮಾತನಾಡಿದರು.


ವೇದಿಕೆಯಲ್ಲಿ ಧರ್ಮದರ್ಶಿ ರಾಘವೇಂದ್ರ ಭಟ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪದ್ಮಾವತಿ ನಾಯ್ಕ, ಸಿ.ಆರ್.ಪಿ ಪ್ರಕಾಶ ಶೇಟ್ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ನೀಲಕಂಠ ನಾಯ್ಕ ಸ್ವಾಗತಿಸಿದರು. ರವಿ ನಾಯ್ಕ ರಾಯಲಕೇರಿ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ಮಮತಾ ಪಟಗಾರ ವರದಿ ವಾಚಿಸಿದರು. ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಹಾಗೂ ಭಾರತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಭೆಯ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ತಾಂಡವ ನೃತ್ಯ ಕಲಾ ತಂಡದಿಂದ ವಿಶೇಷ ಕಾರ್ಯಕ್ರಮ ನಡೆಯಿತು. ಮುಂಜಾನೆ ಶಾರದಾ ಪೂಜೆ ನೆರವೇರಿಸಲಾಯಿತು.

About The Author

error: Content is protected !!