April 15, 2026

ಪೂರ್ವ ವಿದ್ಯಾರ್ಥಿಗಳ ಸಹಕಾರವೇ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಬಲ: ಆನಂದ ಭಟ್


ಹೊನ್ನಾ

ವರ: ಪೂರ್ವ ವಿದ್ಯಾರ್ಥಿಗಳ ಸಹಕಾರವಿಲ್ಲದೇ ಯಾವುದೇ ಶಿಕ್ಷಣ ಸಂಸ್ಥೆ ಮುಂದಿನ ಹೆಜ್ಜೆ ಇಡುವುದು ಕಷ್ಟಕರವಾಗಲಿದೆ ಎಂದು ಬಿ.ಎನ್.ಬಿ ಸೆಕ್ಯುರಿಟಿ ಅಂಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಭಟ್ ಅಭಿಪ್ರಾಯಪಟ್ಟರು.


ಎಂ.ಪಿ.ಇ ಸೊಸೈಟಿ ಹಾಗೂ ಎಸ್.ಡಿ.ಎಂ. ಕಾಲೇಜು ಪೂರ್ವ ವಿದ್ಯಾರ್ಥಿ ಸಂಘದ ವತಿಯಿಂದ ಹೊನ್ನಾವರದ ಎಸ್.ಡಿ.ಎಂ. ಕಾಲೇಜು ಆವರಣದಲ್ಲಿ ಆಯೋಜಿಸಲಾದ “ಎಸ್.ಡಿ.ಎಂ. ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕಲಿತ ವಿದ್ಯಾಸಂಸ್ಥೆಯೊಂದಿಗೆ ಪ್ರತಿಯೊಬ್ಬರೂ ಆತ್ಮೀಯ ಬಾಂಧವ್ಯ ಹೊಂದಿರಬೇಕು. ತಂತ್ರಜ್ಞಾನ ಬದಲಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣದ ಗುಣಮಟ್ಟವನ್ನು ಕೂಡಾ ಅದಕ್ಕೆ ತಕ್ಕಂತೆ ಸುಧಾರಿಸುವ ಜವಾಬ್ದಾರಿ ವಿದ್ಯಾಸಂಸ್ಥೆಗಳ ಮೇಲಿದೆ ಎಂದು ಹೇಳಿದರು. ಇಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿದ್ದು, ಭವಿಷ್ಯದಲ್ಲಿ ಎಐ ತಂತ್ರಜ್ಞಾನವು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೇ ಮರಳಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.


ಉಡುಪಿ ಅಸೆಮ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಪವನ್ ಕಿರಣ್ ಕೆರೆ ಮಾತನಾಡಿ, ಭಾರತೀಯ ಶಿಕ್ಷಣ ಪದ್ಧತಿ ಸಂಪೂರ್ಣ ತೃಪ್ತಿಯನ್ನು ನೀಡಿದೆ. ಹಲವು ದಶಕಗಳಿಂದ ವಿದ್ಯಾರ್ಜನೆ ನೀಡುತ್ತಿರುವ ಈ ಸಂಸ್ಥೆ ವಿಶ್ವದ ವಿವಿಧ ಭಾಗಗಳಲ್ಲಿ ತನ್ನ ಶಿಷ್ಯರನ್ನು ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯ ಆತಿಥ್ಯ ಪರಂಪರೆ ಹಾಗೂ ಮಾನವೀಯ ಮೌಲ್ಯಗಳು ಗಮನಾರ್ಹವಾಗಿವೆ. ಇಂತಹ ಮೌಲ್ಯಗಳು ಕನ್ನಡ ಶಾಲೆಗಳ ಮೂಲಕ ಬೆಳೆದು ಬಂದಿದೆ ಎಂದು ಹೇಳಿದರು.


ಧರ್ಮಸ್ಥಳ ಸಂಸ್ಥೆಯ ಎಸ್.ಡಿ.ಎಂ. ಎಂಬ ಹೆಸರಿನ ಗೌರವವನ್ನು ಎಂ.ಪಿ.ಐ ಸಂಸ್ಥೆಗೆ ನೀಡಿರುವುದು ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಸಹಕಾರದಿಂದ ಸಾಧ್ಯವಾಗಿದೆ. ಈ ಹೆಗ್ಗಳಿಕೆಯನ್ನು ಮುಂದುವರಿಸಿಕೊಂಡು ಸಂಸ್ಥೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಿ ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಪ್ರಾಚಾರ್ಯರು, ನಿವೃತ್ತ ಉಪನ್ಯಾಸಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.


ಎಂ.ಪಿ.ಇ ಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ಸಂಸ್ಥೆಯ ಪ್ರತಿಯೊಂದು ಯಶಸ್ಸಿನ ಹಿಂದೆ ಪೂರ್ವ ವಿದ್ಯಾರ್ಥಿಗಳ ಸಹಕಾರವಿದೆ. ದಾನಿಗಳ ಸಹಕಾರ ಮತ್ತೊಬ್ಬರಿಗೆ ಪ್ರೇರಣೆಯಾಗುತ್ತದೆ. ಪುನರ್ಮಿಲನದ ಉದ್ದೇಶ ಸಂಸ್ಥೆಯನ್ನು ಇನ್ನಷ್ಟು ಉನ್ನತ ಹಂತಕ್ಕೆ ತಲುಪಿಸುವುದಾಗಿದೆ ಎಂದು ಹೇಳಿದರು. ಪ್ರತಿವರ್ಷ ಡಿಸೆಂಬರ್ 24ರಂದು “ಎಸ್.ಡಿ.ಎಂ. ಸಂಭ್ರಮ” ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಘೋಷಿಸಿದರು.
ವೇದಿಕೆಯಲ್ಲಿ ಎಸ್.ಡಿ.ಎಂ. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ ಕಾಮತ್, ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ. ಭಟ್, ಉಪಾಧ್ಯಕ್ಷ ನಾಗರಾಜ ಕಾಮತ್, ಸುರೇಶ್ ಶೇಟ್, ಪ್ರಾಚಾರ್ಯರಾದ ಡಾ. ಜಿ.ಎಂ. ಭಟ್, ಎಂ.ಎಚ್. ಭಟ್, ಡಾ. ವಿಜಯಲಕ್ಷ್ಮೀ ನಾಯಕ, ರಾಜು ಮಾಳಗಿಮನೆ, ಶಿವರಾಮ ಶಾಸ್ತ್ರಿ, ಪಿ.ಎಂ. ಹೊನ್ನಾವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಡಿ.ಎಲ್. ಹೆಬ್ಬಾರ ಸ್ವಾಗತಿಸಿದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಹಾಗೂ ಬಿಂದು ಅವಧಾನಿ ಕಾರ್ಯಕ್ರಮ ನಿರ್ವಹಿಸಿದರು.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!