ಅಳೇಕೋಡಿ ಬಂದರಿನಲ್ಲಿ ತೇಲಿ ಬಂದ ದೇಹ; ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆ

ಭಟ್ಕಳ: ಕಳೆದ ವಾರ ಮೀನುಗಾರಿಕೆಗೆ ತೆರಳಿದ್ದ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಒಡಿಶಾ ರಾಜ್ಯದ ಯುವಕನ ಶವ ಅಳೇಕೋಡಿ ಬಂದರಿನಲ್ಲಿ ಪತ್ತೆಯಾಗಿದೆ.
ಒಡಿಶಾ ರಾಜ್ಯದ ಸುಂದರಗಢ ಜಿಲ್ಲೆಯ 27 ವರ್ಷದ ಜೈರಾಮ್ ಬಿರಗಂಟಿ ಮೃತ ಯುವಕನಾಗಿದ್ದಾನೆ. ಆತ ಅಂಕೋಲಾ ತದಡಿ ಮೂಲದ ಮಾಲೀಕರಿಗೆ ಸೇರಿದ ‘ಶ್ರೀ ಮುಖಾಂಬಿಕಾ’ ಬೋಟ್‌ನಲ್ಲಿ ಮೀನುಗಾರಿಕೆ ಕಾರ್ಯದಲ್ಲಿ ತೊಡಗಿದ್ದ ವೇಳೆ, ಬೋಟ್ ಹತ್ತುವಾಗ ಕಾಲು ಜಾರಿ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದನು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಾಪತ್ತೆಯಾದ ಯುವಕನಿಗಾಗಿ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ವ್ಯಾಪಕ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ಅಳೇಕೋಡಿ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್, ಪಿಎಸೈ ಮಲ್ಲಿಕಾರ್ಜುನ ಕೊರಾಣಿ ಹಾಗೂ ಸಿಬ್ಬಂದಿಗಳಾದ ಮದರಸಾಬ್ ಚಿಕೇರಿ, ಅಂಬರೀಶ್ ಕುಬಾರಿ, ಕಿರಣ್ ತಿಲಗಂಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಶವಗಾರದಲ್ಲಿ ಇಡಲಾಯಿತು.
ಒಡಿಶಾದಿಂದ ಭಟ್ಕಳಕ್ಕೆ ಬಂದ ಮೃತನ ಕುಟುಂಬಸ್ಥರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಅವರಿಗೆ ಹಸ್ತಾಂತರಿಸಲಾಯಿತು.

ಶವವನ್ನು ಒಡಿಶಾಕ್ಕೆ ಸಾಗಿಸುವುದು ಕಷ್ಟಕರವಾಗಿದ್ದರಿಂದ, ಬೋಟ್ ಮಾಲೀಕರು ಹಾಗೂ ಸ್ಥಳೀಯ ಸಮಾಜಸೇವಕ ಮಂಜು ನಾಯ್ಕ ಮುಟ್ಟಳ್ಳಿ ಮತ್ತು ಲೈಫ್ ಕೇರ್ ಆಂಬುಲೆನ್ಸ್ ಚಾಲಕರ ಸಹಾಯದಿಂದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ನಂತರ ಕುಟುಂಬಸ್ಥರು ತಮ್ಮ ಊರಿಗೆ ತೆರಳಿದರು.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ