ಭಟ್ಕಳ: ತಾಲೂಕಿನ ಮುಟ್ಟಳ್ಳಿ ಶಾಲಾ ಮೈದಾನದಲ್ಲಿ ನಡೆದ “ಸಂಜೀವಿನಿ ಮಾಸಿಕ ಸಂತೆ” ಗ್ರಾಹಕರ ಗಮನ ಸೆಳೆದಿತು. ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ಗೃಹೋತ್ಪನ್ನಗಳ ಖರೀದಿಗೆ ಸ್ಥಳೀಯರು ಹೆಚ್ಚಿನ ಉತ್ಸಾಹ ತೋರಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕ ಪಂಚಾಯತ್ ಭಟ್ಕಳ ಹಾಗೂ ಮುಟ್ಟಳ್ಳಿಯ ಶ್ರೀ ಮಂಜುನಾಥ ಸಂಜೀವಿನಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಈ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಟ್ಟಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 60ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿಂದ 40ಕ್ಕೂ ಹೆಚ್ಚು ಮಹಿಳಾ ಸದಸ್ಯರು ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಸಿಹಿತಿನಿಸುಗಳು, ಬಟ್ಟೆಗಳು, ಮನೆಗಳಲ್ಲಿ ಬೆಳೆದ ತರಕಾರಿಗಳು, ಸೊಪ್ಪುಗಳು, ಹಣ್ಣುಗಳು ಹಾಗೂ ಮನೆಮದ್ದಿನ ಉತ್ಪನ್ನಗಳು ಗ್ರಾಹಕರ ಮೆಚ್ಚುಗೆ ಪಡೆದವು.
ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಖರೀದಿ ನಡೆಸುವ ಮೂಲಕ ಮಹಿಳೆಯರ ಪರಿಶ್ರಮಕ್ಕೆ ಬೆಂಬಲ ನೀಡಿದರು. ಈ ಸಂತೆ ಮಹಿಳೆಯರಲ್ಲಿ ಕೃಷಿ ಚಟುವಟಿಕೆಗಳ ಮಹತ್ವ, ಶ್ರಮದ ಮೌಲ್ಯ ಹಾಗೂ ವ್ಯಾಪಾರ ಕೌಶಲ್ಯಗಳ ಅರಿವು ಹೆಚ್ಚಿಸುವಲ್ಲಿ ಸಹಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕರಾದ ಕುಮಾರಿ ಶಾಂತಿಕಾ ನಾಯಕ, ವಲಯ ಮೇಲ್ವಿಚಾರಕರಾದ ಗೋಪಾಲ ನಾಯ್ಕ, ವೆಂಕಟೇಶ ದೇವಡಿಗ, ದಿವ್ಯ ಶೆಟ್ಟಿ, ಉಷಾ ದೇವಡಿಗ, ಒಕ್ಕೂಟದ ಸದಸ್ಯರು ಹಾಗೂ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

More Stories
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ
ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು