April 15, 2026

ಅನ್ಯ ಧರ್ಮೀಯರು ಕೂಡ ದೇವರ ದರ್ಶನ ಪಡೆಯಲು ಮುಚ್ಚಳಿಕೆ ನೀಡುವ ವಾಡಿಕೆ ಇದೆ: ಟಿಟಿಡಿ ಸದಸ್ಯ ನರೇಶ್ ಕುಮಾರ್

ಬೆಂಗಳೂರು ಏಪ್ರಿಲ್ 11: “ದರ್ಶನ್ ಹಿಂದೂ ಎಂದು ಮುಚ್ಚಳಿಕೆ ನೀಡಿರುವುದಕ್ಕೆ ಅವರಿಗೆ ಸದಸ್ಯತ್ವ ನೀಡಲಾಗಿದೆ. ಅನ್ಯ ಧರ್ಮೀಯರು, ಅವರ ಕುಟುಂಬದ ಸದಸ್ಯರು ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಿರುವ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ಪರಿಶೀಲಿಸಲಿದೆ ಎಂದು ಟಿಟಿಡಿ ಸದಸ್ಯರಾದ ಎಸ್ ನರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. “ದರ್ಶನ್ ಅವರ ಕುಟುಂಬ ಸದಸ್ಯರು ಚರ್ಚ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ನನಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಹಿಂದೂ ಧರ್ಮದವರಿಗೆ ಮಾತ್ರವೇ ಸದಸ್ಯತ್ವ ನೀಡಲು ಅವಕಾಶವಿದ್ದು, ದರ್ಶನ್ ಕೂಡ ಹಿಂದೂ ಧರ್ಮದವರಾಗಿದ್ದಾರೆ. ಈ ಪ್ರಕರಣದ ಬಗ್ಗೆ ಮಂಡಳಿ ಪರಿಶೀಲಿಸಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

“ಮಂಡಳಿ ನಿಯಮದ ಪ್ರಕಾರ ಹಿಂದೂಗಳಿಗೆ ಮಾತ್ರವೇ ಸದಸ್ಯತ್ವ ನೀಡಲು ಅವಕಾಶವಿದೆ. ದರ್ಶನ್ ಸದಸ್ಯತ್ವ ಪಡೆಯುವ ವೇಳೆಯಲ್ಲಿ ಹಿಂದೂ ಎಂದು ಮುಚ್ಚಳಿಕೆ ನೀಡಿದ್ದಾರೆ. ಇದೀಗ ಅವರ ಕುಟುಂಬದ ಸದಸ್ಯರು ಚರ್ಚ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಕೆಲವು ಸಾಮಾಜಿಕ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಇಲ್ಲ.

“ಮಂಡಳಿಯ ಅಧ್ಯಕ್ಷರಾಗಿ ನಾಯ್ಡು ಅವರು ಅಧಿಕಾರವಹಿಸಿಕೊಂಡ ಬಳಿಕ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಹಿಂದೂವಲ್ಲದ ಸಿಬ್ಬಂದಿಯನ್ನು ವಜಾಗೊಳಿಸಲಾಯಿತು. ಹೀಗಾಗಿ ಮಂಡಳಿ ಸದಸ್ಯತ್ವ ಮಾತ್ರವಲ್ಲ, ಮಂಡಳಿಯಲ್ಲಿ ಸಿಬ್ಬಂದಿಯಾಗುವುದಕ್ಕೂ ಹಿಂದೂ ಧರ್ಮ ಕಡ್ಡಾಯವಾಗಿದೆ. ಎಲ್ಲಿಯೂ ಕೂಡ ಅನ್ಯ ಧರ್ಮಿಯರನ್ನು ಸೇರಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ”.

“ಈ ಹಿಂದೆ ದಿವಂಗತ ಮಾಜಿ ರಾಷ್ಟ್ರಪತಿ ಎ. ಪಿ.ಜಿ. ಅಬ್ದುಲ್ ಕಲಾಂ ಅವರು ಕೂಡ ತಮ್ಮ ಧರ್ಮದ ಬಗ್ಗೆ ಮುಚ್ಚಳಿಕೆ ನೀಡಿದ ಮೇಲೆ ನಾವು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ನಿಯಮ ಎಲ್ಲರಿಗೂ ಕಡ್ಡಾಯವಾಗಿ ಅನ್ವಯವಾಗುವಂತೆ ಮಂಡಳಿ ನೋಡಿಕೊಳ್ಳುತ್ತಿದೆ. ಇಂತಹ ವೇಳೆಯಲ್ಲಿ ದರ್ಶನ್ ಎಂಬುವರ ಕುಟುಂಬದ ಸದಸ್ಯರು ಚರ್ಚ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನುವುದರ ಬಗ್ಗೆ ಮಂಡಳಿಗೆ ಯಾವುದೇ ಅಧಿಕೃತ ದಾಖಲೆಗಳು ಸಿಕ್ಕಿಲ್ಲ. ಆದರೆ, ದೂರು ಬಂದ ಹಿನ್ನೆಲೆಯಲ್ಲಿ ಈ ಪ್ರಕರಣ ಕುರಿತು ಸತ್ಯ ಸತ್ಯತೆಯನ್ನು ತಿಳಿಯುವ ಕೆಲಸವನ್ನು ಮಂಡಳಿ ನಿರ್ಧಾರ ಮಾಡಿದೆ” ಎಂದರು.

About The Author

error: Content is protected !!