ಭಟ್ಕಳ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ ಭಟ್ಕಳ, ಜಾಲಿ ಪಟ್ಟಣ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ
ಅವರ 119ನೇ ಜನ್ಮ ದಿನಾಚರಣೆ ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಡಿವೈಎಸ್ಪಿ ಬಿ. ಗಿರೀಶ್ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯಾನಂತರ ಭಾರತಕ್ಕೆ ಅತ್ಯಂತ ಸಮಗ್ರ ಮತ್ತು ಪ್ರಗತಿಪರ ಸಂವಿಧಾನವನ್ನು ನೀಡಿದ ಮಹಾನ್ ವ್ಯಕ್ತಿ ಡಾ. ಅಂಬೇಡ್ಕರ್ ಎಂದು ಹೇಳಿದರು. ಅಪಾರ ವಿದ್ಯಾಭ್ಯಾಸದ ಮೂಲಕ ಹಲವು ಪದವಿಗಳನ್ನು ಪಡೆದ ಅವರು ದೇಶದ ಭವಿಷ್ಯವನ್ನು ಮನನ ಮಾಡಿ ಸಂವಿಧಾನ ರೂಪಿಸಿದ್ದು, ಅದರಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯತತ್ತ್ವಗಳನ್ನು ಪ್ರತಿಪಾದಿಸಲಾಗಿದೆ ಎಂದರು.
ಭಾರತೀಯ ಸಂವಿಧಾನದ 14ನೇ ವಿಧಿ ಸಮಾನತೆಯನ್ನು ಖಚಿತಪಡಿಸಿದರೆ, 19ರಿಂದ 21ನೇ ವಿಧಿಗಳು ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಜೀವ ಹಕ್ಕುಗಳನ್ನು ರಕ್ಷಿಸುತ್ತವೆ. ಆದಾಗ್ಯೂ, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಆಧಾರಿತ ಭೇದಭಾವ ಇನ್ನೂ ಮುಂದುವರಿಯುತ್ತಿರುವುದು ವಿಷಾದಕರ ಸಂಗತಿ ಎಂದು ಅವರು ಹೇಳಿದರು. ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುವುದು ಅವರ ಆದರ್ಶಗಳನ್ನು ಸಮಾಜದಲ್ಲಿ ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ ಎಂದರು. ಯುವಕರು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಉಚಿತ ತರಬೇತಿಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಬಾಬು ಜಗಜೀವನರಾಂ ಅವರ ಸೇವೆಯನ್ನು ಸ್ಮರಿಸಿ ಮಾತನಾಡಿದ ಅವರು, ದೇಶದ ಆಹಾರ ಭದ್ರತೆ, ಸಾಮಾಜಿಕ ಸಮಾನತೆ ಹಾಗೂ ದಲಿತರ ಹಕ್ಕುಗಳಿಗಾಗಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅವರು ಕೈಗೊಂಡ ಯೋಜನೆಗಳು ಕ್ರಾಂತಿಕಾರಿಯಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅನಂತರ ಜಾತಿ ವಿವಾಹವಾದವರಿಗೆ ಪ್ರೋತ್ಸಾಹ ಧನದ ಎಫ್‌ಡಿ ಸರ್ಟಿಫಿಕೇಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ಗುಡ್ಡಪ್ಪ ಹರಿಜನ ಅವರು ಡಾ. ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರೆ, ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಶೆಟ್ಟಿ ಅವರು ಡಾ. ಜಗಜೀವನರಾಂ ಕುರಿತು ಉಪನ್ಯಾಸ ನೀಡಿದರು.
ಇದೇ ವೇಳೆ, 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಉನ್ನತ ಸಾಧನೆ ಮಾಡಿದ ತಾಲೂಕಿನ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತದಿಂದ ಗೌರವ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಬಾಬಾಸಾಹೇಬ್ ಮಾನೆ, ತಾಲೂಕು ಪಂಚಾಯತ್ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಮಹಾಲೆ, ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಂಜಪ್ಪ ಎನ್., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಜಿ. ಹೆಗಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

More Stories
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ
ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು