April 22, 2026

ಕಾರ್ಕಳದಲ್ಲಿ ಏಪ್ರಿಲ್ 24–26ರವರೆಗೆ ಬೃಹತ್ ಹಲಸಿನ ಮೇಳ


ಕಾರ್ಕಳ: ಇಲ್ಲಿನ ಬಿಲ್ಲವ ಸಭಾಭವನದಲ್ಲಿ ಏಪ್ರಿಲ್ 24, 25 ಹಾಗೂ 26ರಂದು ಬೃಹತ್ ಹಲಸಿನ ಮೇಳವನ್ನು ಆಯೋಜಿಸಲಾಗಿದೆ ಎಂದು ವಂಶಿ ಇವೆಂಟ್ಸ್‌ನ ರಮಿತಾ ಸೂರ್ಯವಂಶಿ ತಿಳಿಸಿದರು. ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


ಮೇಳವು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಲಿವೆ.
ರೋಟರಿ ಕ್ಲಬ್‌ನ ನವೀನ್ ಮಾತನಾಡಿ, ಹಲಸಿನ ಹಣ್ಣಿನ ಪೌಷ್ಟಿಕ ಹಾಗೂ ಔಷಧೀಯ ಗುಣಗಳ ಬಗ್ಗೆ ವಿವರಿಸಿ, ಗ್ರಾಮೀಣ ಸೊಗಡನ್ನು ಇಂದಿನ ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.


ಗಣೇಶ್ ಶೆಟ್ಟಿ ಮಾತನಾಡಿ, ಹಲಸಿಗೆ ಮೌಲ್ಯವರ್ಧನೆ ನೀಡುವುದು ಮೇಳದ ಪ್ರಮುಖ ಉದ್ದೇಶವಾಗಿದ್ದು, ವಿವಿಧ ರಾಜ್ಯಗಳ ಹಲಸಿನ ಜಾತಿಗಳನ್ನು ಪರಿಚಯಿಸಲಾಗುವುದು ಎಂದರು. ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.


ಮೇಳದಲ್ಲಿ ಇಳಕಲ್ ಖಾದಿ ಸೀರೆಗಳು, ಗೃಹಬಳಕೆಯ ವಸ್ತುಗಳು, ಬಿದಿರು ಉತ್ಪನ್ನಗಳು, ದೀಪಾಲಂಕೃತ ಮಣ್ಣಿನ ಮಡಕೆಗಳು ಸೇರಿದಂತೆ 70ಕ್ಕೂ ಹೆಚ್ಚು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಜೊತೆಗೆ ಭಜನಾ ಸಪ್ತಸ್ವರ, ಸಂಗೀತ ಸ್ಪರ್ಧೆಗಳು ಹಾಗೂ ಹಲಸಿನ ವಿವಿಧ ಖಾದ್ಯಗಳ ಪ್ರದರ್ಶನವೂ ನಡೆಯಲಿದೆ ಎಂದು ಉದ್ಯಮಿ ವಾಸುದೇವ ಭಟ್ ಹೇಳಿದರು.
ಈ ಸಂದರ್ಭದಲ್ಲಿ ವಂಶಿ ಇವೆಂಟ್ಸ್ ಹಾಗೂ ಬೆನಕ ಇವೆಂಟ್ಸ್‌ನ ಪ್ರತಿನಿಧಿಗಳು, ಯುವವಾಹಿನಿಯ ಅಧ್ಯಕ್ಷ ಪ್ರಕಾಶ್ ಪೂಜಾರಿ ಕೆರುವಾಶೆ, ಭಾಸ್ಕರ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಅರುಣ ಭಟ್ ಕಾರ್ಕಳ

About The Author

error: Content is protected !!