April 29, 2026

ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್

09 ಸುವರ್ಣ ಪದಕಗಳು ಹಾಗೂ 02 ನಗದು ಪುರಸ್ಕಾರಗಳನ್ನು ಪಡೆದು ಅಂಜುಮನ್ ಕಾಲೇಜಿಗೆ ಕೀರ್ತಿಯ ಕಿರೀಟ ತೊಡಿಸಿದ ಶ್ರೇಯಸ್ ನಾಯಕ

ಭಟ್ಕಳ: ಸ್ಥಳೀಯ ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದ ಶ್ರೇಯಸ್ ನಾಯಕ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕಿಗೆ ಭಾಜನನಾಗಿದ್ದಾನೆ. ಶ್ರೇಯಸ್ ಕನ್ನಡ ಎಂ.ಎ. ಪದವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಮೊದಲ ರ್ಯಾಂಕ್ ಪಡೆಯುವುದರ ಜೊತೆಗೆ ಬರೋಬ್ಬರಿ ಒಂಬತ್ತು ಚಿನ್ನದ ಪದಕಗಳನ್ನು ಮತ್ತು ಎರಡು ನಗದು ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ.

ದಿವಂಗತ ಶ್ರೀ ಮಲ್ಲಪ್ಪ ಯಲ್ಲಪ್ಪ ಖಕವಳಿ ಸ್ಮರಣಾರ್ಥ ಸುವರ್ಣ ಪದಕ, ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಸ್ವರ್ಣ ಪದಕ, ಡಾ. ಆರ್. ಸಿ. ಹಿರೇಮಠ ಚಿನ್ನದ ಪದಕ, ಪ್ರೊ. ಕೆ. ಜಿ. ಕುಂದಣಗಾರ ಚಿನ್ನದ ಪದಕ, ವಿದ್ಯಾ ವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ಸ್ವರ್ಣ ಪದಕ, ಡಾ. ವಿಲ್ಯಂ ಮಾಡ್ತಾ ಗೋಲ್ಡ್ ಮೆಡಲ್, ಡಾ . ಗುರುಲಿಂಗ ಕಾಪಸೆ ಸುವರ್ಣ ಪದಕ, ಶ್ರೀ ಸಂಗಯ್ಯಸ್ವಾಮಿ ರಾಚಯ್ಯಸ್ವಾಮಿ ವಸ್ತ್ರದ ಚಿನ್ನದ ಪದಕ, ಮುರುಘಾಮಠದ ಮಹಾಂತ ಸ್ವಾಮಿ ಸುವರ್ಣ ಪದಕ -ಇವು ಶ್ರೇಯಸ್ ನಾಯಕ ಕೊರಳಿಗೇರಿದ ಚಿನ್ನದ ಪದಕಗಳಾಗಿವೆ.

ಒಂಬತ್ತು ಸುವರ್ಣ ಪದಕಗಳ ಜೊತೆಗೆ ಈ ಪ್ರತಿಭಾನ್ವಿತ ವಿದ್ಯಾರ್ಥಿ ಇತರೆ ಎರಡು ಪುರಸ್ಕಾರಗಳನ್ನೂ ತನ್ನದಾಗಿಸಿಕೊಂಡಿದ್ದಾನೆ. ರೆವರೆಂಡ್ ಚೆನ್ನಪ್ಪ ಉತ್ತಂಗಿ ಜನ್ಮಶತಾಬ್ದಿ ಸ್ಮರಣಾರ್ಥ ಪುರಸ್ಕಾರ ಹಾಗೂ ನಾಡೋಜ ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಸ್ಮರಣಾರ್ಥ ಪುರಸ್ಕಾರಗಳು ಶ್ರೇಯಸ್ ಪಾಲಾಗಿವೆ.

ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರೂ ಕುಲಾಧಿಪತಿಗಳೂ ಆದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಶ್ರೇಯಸ್ಸನಿಗೆ ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಿದರೆ, ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಡಾ.‌ ಎಂ ಸಿ ಸುಧಾಕರ ಅವರು ಶ್ರೇಯಸ್ ಕೊರಳಿಗೆ ಚಿನ್ನದ ಪದಕಗಳನ್ನು ತೊಡಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಭಟ್ಕಳದಲ್ಲೇ ಶಿಕ್ಷಣವನ್ನು ಪಡೆದ ಶ್ರೇಯಸ್ ಆರಂಭದಿಂದಲೂ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುತ್ತ ಬಂದಿದ್ದಾನೆ. ಸಾಧನೆ ಮಾಡುವವರಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಇರುವ ಹೆಸರಾಂತ ಶಿಕ್ಷಣ ಸಂಸ್ಥೆಗಳೇ ಬೇಕಾಗಿಲ್ಲ, ಭಟ್ಕಳದಂತ ಪ್ರದೇಶದಲ್ಲಿರುವ ಶಾಲಾ ಕಾಲೇಜುಗಳಲ್ಲಿ ಓದಿಯೂ ಅತ್ಯುನ್ನತ ಸಾಧನೆ ಮಾಡಬಹುದು ಎಂಬುದನ್ನು ಶ್ರೇಯಸ್ ಸಾಬೀತು ಪಡಿಸಿದ್ದಾನೆ.

ತನ್ನ ಈ ಸಾಧನೆಗೆ ಅಂಜುಮನ್ ಕಾಲೇಜಿನ ಎಲ್ಲಾ ಅಧ್ಯಾಪಕರು, ಅದರಲ್ಲೂ ವಿಶೇಷವಾಗಿ ಕನ್ನಡ ವಿಭಾಗದ ಅಧ್ಯಾಪಕರ ಬೋಧನೆ, ಮಾರ್ಗದರ್ಶನ, ಪ್ರೋತ್ಸಾಹ ಕಾರಣವೆಂದು ಶ್ರೇಯಸ್ ಹೇಳುತ್ತಾನೆ.

ಶ್ರೇಯಸ್ ಸಾಧಿಸಿದ ಈ ಅಭೂತಪೂರ್ವ ಸಾಧನೆಯನ್ನು ಕಂಡು ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿಯವರು, ಕಾಲೇಜಿನ ಅಧ್ಯಾಪಕ ವೃಂದದವರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿ ಸಮೂಹ ಹಾಗೂ ಶ್ರೇಯಸ್ಸನ ಗೆಳೆಯರ ಬಳಗ ಹರ್ಷವನ್ನು ವ್ಯಕ್ತಪಡಿಸುವುದರ ಜೊತೆಗೆ ಅಭಿನಂದಿಸಿದ್ದಾರೆ.

ಪ್ರೊ ಆರ್ ಎಸ್ ನಾಯಕ ಮತ್ತು ರೇಣುಕಾ ದಂಪತಿಗಳ ಮಗನಾದ ಶ್ರೇಯಸ್ ಸದ್ಯ ತಮಿಳುನಾಡಿನ ಪೆರಂಬಲೂರು ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ ಪ್ರೊಬೇಷನರಿ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈತ ಒಬ್ಬ ವಿಧೇಯ ವಿದ್ಯಾರ್ಥಿಯಾಗಿದ್ದು, ಈತನ ಭವಿಷ್ಯ ಉಜ್ವಲವಾಗಲೆಂದು ಹಿತೈಷಿಗಳೆಲ್ಲ ಹಾರೈಸಿದ್ದಾರೆ.

About The Author

error: Content is protected !!