ಭಟ್ಕಳ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಸಮಾಜದಲ್ಲಿ ವಿವಿಧ ರೀತಿಯ ದೌರ್ಜನ್ಯಗಳನ್ನು ಎದುರಿಸುತ್ತಿರುವ ಹಿನ್ನೆಲೆ ಆತ್ಮರಕ್ಷಣೆಗಾಗಿ ಕರಾಟೆ ಕಲಿಯುವುದು ಅಗತ್ಯವಾಗಿದೆ ಎಂದು ಜನತಾ ಕೋ-ಆಪ್ ಸೊಸೈಟಿ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ರಾಮಚಂದ್ರ ಕಿಣಿ ಹೇಳಿದರು.
ಅವರು ಶುಕ್ರವಾರ ಶಿರಾಲಿಯಲ್ಲಿ ನೂತನ ನ್ಯೂ ಇಂಟರ್‌ನ್ಯಾಷನಲ್ ಶೋಟೋಕಾನ್ ಕರಾಟೆ ಅಕಾಡೆಮಿ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸಮರ ಕಲೆಗಳನ್ನು ಕಲಿತರೆ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಯಾವುದೇ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯ ವೃದ್ಧಿಯಾಗುತ್ತದೆ. ಶಿರಾಲಿಯಂತಹ ಗ್ರಾಮೀಣ ಪ್ರದೇಶದಲ್ಲಿ ರಾಜಶೇಖರ ಗೌಡ ಹಾಗೂ ಪ್ರವೀಣ ಅವರು ಈ ತರಬೇತಿ ಕೇಂದ್ರ ಆರಂಭಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಾಲಕರು ತಮ್ಮ ಮಕ್ಕಳನ್ನು ವಾರದಲ್ಲಿ ಮೂರು ದಿನ ನಡೆಯುವ ಇಂತಹ ತರಬೇತಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದರೆ ಸುದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಬೈಂದೂರಿನ ಮೆಸ್ಕಾಂ ಅಧಿಕಾರಿ ಹಾಗೂ ಭಟ್ಕಳದ ಶಿವಾನಂದ ನಾಯ್ಕ ಮಾತನಾಡಿ, ಜಪಾನ್‌ನಲ್ಲಿ ಆರಂಭವಾದ ಕರಾಟೆಗೆ ಅಲ್ಲಿ ವಿಶೇಷ ಮಹತ್ವವಿದ್ದು, ಸುರಕ್ಷತೆ ದೃಷ್ಟಿಯಿಂದ ಇದು ಉತ್ತಮ ಅಭ್ಯಾಸವಾಗಿದೆ ಎಂದು ಹೇಳಿದರು.
ಯೋಗಗುರು ಗೋವಿಂದ ದೇವಾಡಿಗ ಮಾತನಾಡಿ, ಈ ತರಬೇತಿ ಕೇಂದ್ರವನ್ನು ಕರಾಟೆಗೆ ಮಾತ್ರ ಸೀಮಿತಗೊಳಿಸದೆ ಯೋಗ, ಭಜನೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೂ ಬಳಸುವಂತೆ ಸಲಹೆ ನೀಡಿದರು.
ಜಿಲ್ಲಾ ಕರಾಟೆ ಅಸೋಸಿಯೇಷನ್ ಪ್ರಮುಖ ಹಾಗೂ ತರಬೇತುದಾರ ಈಶ್ವರ ನಾಯ್ಕ, ಗಣ್ಯರಾದ ರಾಜು ನಾಯ್ಕ, ಕಟ್ಟಡ ಮಾಲಿಕ ದುರ್ಗಾದಾಸ್ ನಾಯ್ಕ, ತರಬೇತುದಾರ ರಾಜಶೇಖರ ಗೌಡ, ಪ್ರವೀಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಕ್ಷಕ ನಾರಾಯಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.

More Stories
ಭಟ್ಕಳದಲ್ಲಿ ಮನೆ ಕಳ್ಳತನ: 5.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೆ
ಮುರ್ಡೇಶ್ವರದಲ್ಲಿ ಭೀಕರ ರಸ್ತೆ ಅಪಘಾತ: ಮಾಜಿ ಸೈನಿಕ ಸಾವು, ಮೂವರಿಗೆ ಗಾಯ
ಭಟ್ಕಳ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡಕ್ಕೆ ಮೇ 14ರಂದು ಶಿಲಾನ್ಯಾಸ