ಭಟ್ಕಳ: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಇಲ್ಲಿನ ಸಚಿವರ ಕಾರ್ಯಾಲಯದಲ್ಲಿ ಜನಸ್ಪಂದನ ಸಭೆ ನಡೆಸಿದರು.

ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಜನರು ಸಭೆಗೆ ಆಗಮಿಸಿ ರಸ್ತೆ ದುರಸ್ತಿ, ಸಭಾಭವನ ನಿರ್ಮಾಣ, ಕುಡಿಯುವ ನೀರು, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಗಳಿಗೆ ಆಸ್ಪತ್ರೆ ವೆಚ್ಚ ಭರಿಸಲು ನೆರವು, ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ಸೇರಿದಂತೆ ವೈಯಕ್ತಿಕ ಸಮಸ್ಯೆಗಳ ಕುರಿತೂ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಚಿವರು, ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು. ನಿಯಮಗಳಿಂದ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯಾದರೆ ವೈಯಕ್ತಿಕ ಮಟ್ಟದಲ್ಲಿಯೂ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ಮೀನುಗಾರಿಕಾ ದೋಣಿಗಳಿಗೆ ನೀಡಲಾಗುತ್ತಿರುವ ಸೀಮೆ ಎಣ್ಣೆ ದರ ಏರಿಕೆ ಕುರಿತು ಮನವಿ ಸಲ್ಲಿಸಿದರು.
2022-23ರ ನಂತರ ಪಡಿತರ ವ್ಯವಸ್ಥೆಯ ಮೂಲಕ ಮೀನುಗಾರರಿಗೆ ನೀಡಲಾಗುತ್ತಿದ್ದ ಸೀಮೆ ಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಬಳಿಕ ಕೈಗಾರಿಕಾ ಬಳಕೆಯ ಸೀಮೆ ಎಣ್ಣೆ ವಿತರಣೆ ಮಾಡಲಾಗುತ್ತಿದೆ. ಆದರೆ ಕಳೆದ ಎರಡು ತಿಂಗಳ ಹಿಂದೆ ಲೀಟರ್‌ಗೆ ₹115ಕ್ಕೆ ದರ ಏರಿಕೆಯಾಗಿರುವುದರಿಂದ ನಾಡದೋಣಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಒಕ್ಕೂಟದ ಸದಸ್ಯರು ದೂರಿದರು.
ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ದರ ಇಳಿಕೆಗೆ ಕ್ರಮ ಕೈಗೊಳ್ಳದಿದ್ದರೆ ಸಾಂಪ್ರದಾಯಿಕ ಮೀನುಗಾರಿಕೆ ವೃತ್ತಿಯೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ, ಸೀಮೆ ಎಣ್ಣೆ ದರ ಏರಿಕೆಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಆರೋಪಿಸಿದರು. ಪಡಿತರ ವ್ಯವಸ್ಥೆಯ ಮೂಲಕ ನೀಡುತ್ತಿದ್ದ ಸೀಮೆ ಎಣ್ಣೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗಾರಿಕಾ ಸೀಮೆ ಎಣ್ಣೆ ಒದಗಿಸುತ್ತಿದೆ. ಮೀನುಗಾರರಿಗೆ ಡೀಸೆಲ್ ಸಬ್ಸಿಡಿಗೆ ₹320 ಕೋಟಿ ಹಾಗೂ ಸೀಮೆ ಎಣ್ಣೆ ಸಬ್ಸಿಡಿಗೆ ₹40 ಕೋಟಿ ವೆಚ್ಚ ಮಾಡಲಾಗುತ್ತಿದೆ. ದರ ಇಳಿಕೆಗೆ ಹೆಚ್ಚುವರಿ ಅನುದಾನ ಅಗತ್ಯವಿದ್ದು, ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ನಾಡದೋಣಿ ಮೀನುಗಾರರ ಆಗ್ರಹದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳ ಸಂಸದರೊಂದಿಗೆ ಮೇ 16ರ ಬಳಿಕ ಸಭೆ ನಡೆಸಲು ಸಿದ್ಧವಿರುವುದಾಗಿ ಸಚಿವರು ತಿಳಿಸಿದರು. ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಬೀನಾ ವೈದ್ಯ, ಜಾಲಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮಂಜಪ್ಪ ನಾಯ್ಕ, ಮಂಜುನಾಥ ನಾಯ್ಕ ಬೆಳಕೆ, ವಿಷ್ಣು ದೇವಾಡಿಗ, ನಯನ ನಾಯ್ಕ, ಸುರೇಶ ನಾಯ್ಕ ಹೊಸಮನೆ, ವೆಂಕಟ್ರಮಣ ಮೊಗೇರ, ಗಣಪತಿ ನಾಯ್ಕ ಮುಟ್ಟಳ್ಳಿ, ರಾಜು ಗೊಂಡ ಹಾಗೂ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ ಖಾರ್ವಿ ಉಪಸ್ಥಿತರಿದ್ದರು.

More Stories
ಭಟ್ಕಳದಲ್ಲಿ ಮನೆ ಕಳ್ಳತನ: 5.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೆ
ಮುರ್ಡೇಶ್ವರದಲ್ಲಿ ಭೀಕರ ರಸ್ತೆ ಅಪಘಾತ: ಮಾಜಿ ಸೈನಿಕ ಸಾವು, ಮೂವರಿಗೆ ಗಾಯ
ಭಟ್ಕಳ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡಕ್ಕೆ ಮೇ 14ರಂದು ಶಿಲಾನ್ಯಾಸ