May 24, 2026

ಡಾಕ್ಟರ್ ಮಾಮನೆಂದು ಇನ್ನು ಯಾರನ್ನು ಕರೆಯಲಿ? . ಅವರಿಗೆ ಅವರೇ ಸಾಟಿಯಾಗಿದ್ದರು.

ಕುಮಟಾ : ಒಬ್ಬ ಹೃದಯವಂತ ಮಕ್ಕಳ ಪಾಲಿನ ಆರಾಧ್ಯ ದೈವದಂತಿರುವ, ರೋಗಿಗಳ ಪಾಲಿನ ತಂದೆ ಸಮಾನರಾದ ಅಪರೂಪದ ವ್ಯಕ್ತಿತ್ವದ ಆರ್. ವಿ. ಎಂದೇ ಜಿಲ್ಲೆಯಾದ್ಯಂತ ಪರಿಚಿತರಾಗಿದ್ದರು. ಯಾವುದೇ ಪ್ರತಿಫಲ ಬಯಸದ ಕಾಯಕ ಯೋಗಿಯಂತಿದ್ದರು. 74 ವಸಂತಗಳನ್ನು ಪೂರೈಸಿ ಹಸಿರುಟ್ಟ ನೆಲದಂತೆ ಸದಾ ಸಂಪತ್ ಭರಿತವಾಗಿ ಹಲವರಿಗೆ ಅವರ ಹೆಸರೇ ಉಸಿರಿನಂತಾಗಿ ಬಡವರ ಪಾಲಿನ ಬಂಧುವಾಗಿ ಎಲ್ಲರೊಳಗೊಂದಾಗಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮಗ ಪರೇಶ್ ಮಗಳು ಸ್ನೇಹಲತಾ ಇವರೊಡಗೂಡಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸಿ ಅವರ ಸೂಪ್ತ ಪ್ರತಿಭೆಗೆ ಸಾಣೆ ಹಿಡಿದವರಾಗಿದ್ದರು. ನಾನು ಬಂಗಾರಮಕ್ಕಿ ಶಾಲೆಯಲ್ಲಿರುವಾಗ ಬಿಸಿ ಊಟಕ್ಕೆ ತರಕಾರಿಯನ್ನು ನೀಡಿ ಮಕ್ಕಳನ್ನು ಹರಸಿ ಹಾರೈಸಿದವರು.

ಭಟ್ಕಳ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಅವರು ತಾಲೂಕ ಘಟಕದ ಅಧ್ಯಕ್ಷರಾಗಿದ್ದರು. ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾಗ ನಾನು ತಾಲೂಕಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದೆ. ಬಾಲ್ಯದಲ್ಲಿ ತಂದೆಯನ್ನು ಕಳಕೊಂಡ ನನಗೆ ಡಾ. ಆರ್. ವಿ. ಯವರು ತಂದೆ ಸಮಾನರಾಗಿ ನನ್ನೆಲ್ಲಾ ಸಾಹಿತ್ಯ ಬೆಳವಣಿಗೆಗೆ ಕಾರಣಿಕರ್ತರಾಗಿದ್ದರು. ಸದಾ ಲವಲವಿಕೆಯಿಂದ ನಾನು ಕರೆದಲೆಲ್ಲ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿ ಹಾರೈಸಿದವರು. ಭಟ್ಕಳ ತಾಲೂಕಿನ ಸಾಹಿತ್ಯ ಕ್ಷೇತ್ರದಲ್ಲಿ ಆರ್. ವಿ ಯವರ ಹೆಸರು ಅಜರಾಮರ. ಓರ್ವ ಕನ್ನಡದ ಕಟ್ಟಾಳುಗಳಾಗಿ ಕನ್ನಡದ ಎಲ್ಲಾ ಕೆಲಸಗಳಿಗೆ ಕೈಜೋಡಿಸಿ ಪರಿಷತ್ತಿನ ಬೆಳವಣಿಗೆಗೆ ಕಾರಣರು ಕೂಡ. ತಾಲೂಕಿನ ಹರಿ ಸೇವಾ ಕಾರ್ಯದ ಸಂಪೂರ್ಣ ಮಾಹಿತಿಯನ್ನು ಕಟ್ಟಿಕೊಡುವಲ್ಲಿ ಇವರ ಸೇವೆ ಅಮೂಲ್ಯವಾದದ್ದು.

ಅನೇಕ ಹರಿಸೇವೆಯಲ್ಲಿ ನನ್ನನ್ನು ಕರೆದುಕೊಂಡು ಹೋಗಿರುವುದು ಇನ್ನು ಮಾಸದ ನೆನಪು.ಸರಳ ಸಜ್ಜನಿಕೆಗೆ ಹೆಸರಾದ ಡಾಕ್ಟರ್ ಮಾಮ ಇನ್ನು ನೆನಪು ಮಾತ್ರ ಎಂದ ಅವರು ಜನಪರ ವೈದ್ಯರಾಗಿ, ಸಮಾಜ ಸೇವಕರಾಗಿ, ಸಾಹಿತಿಯಾಗಿ ಚಿರಪರಿಚಿತರಾದ ಡಾ. ಆರ್. ವಿ. ಷರಾಫ್ ರವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ಆರ್ ನಾಯ್ಕ ಕಂಬನಿ ಮಿಡಿದಿದ್ದಾರೆ.

ಮಕ್ಕಳ ಪಾಲಿನ ಆರಾಧ್ಯರಾಗಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸಿ ಅವರ ಸುಪ್ತ ಪ್ರತಿಭೆಗೆ ಅವಕಾಶ ಕಲ್ಪಿಸಿರುತ್ತಾರೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ,ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅನೇಕ ಕೃತಿ ಪ್ರಕಟಿಸಿದ ಷರಾಫ್ ರವರ ನಿಧನ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದರು.

About The Author

error: Content is protected !!