May 27, 2026

ತಾಯಿ ಹೆಸರಿನಲ್ಲಿ ಮಾಡುವ ಪ್ರತಿಭಾ ಪುರಸ್ಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ- ಹಿರಿಯ ಪತ್ರಕರ್ತ ಜಿ.ಯು.ಭಟ್

ಕುಮಟಾ : ವಿದ್ಯೆ, ಗುಣ, ಸಾಧನೆಯಲ್ಲಿ ತಂದೆ-ತಾಯಿರನ್ನು ಮೀರಿ ದೊಡ್ಡವರಾಗಿ ಯಾರು ಬೆಳೆಯುತ್ತಾರೋ ಅವರೇ ನಿಜವಾದ ವಾರಸುದಾರರು. ಅಂತಹ ಸಾಧನೆ ನಿಮ್ಮಿಂದಾಗಲಿ ಎಂದು ಹಿರಿಯ ಪತ್ರಕರ್ತ ಜಿ. ಯು. ಭಟ್ ಹೇಳಿದರು.

ಹೊಳೆಗದ್ದೆ ನಾಗಮ್ಮ ಪ್ರಕಾಶನದ ಆಶ್ರಯದಲ್ಲಿ ಮನೆಯಂಗಳದಲ್ಲಿ ನಡೆದ ಎಸ್.ಎಸ್.ಎಲ್.ಸಿ.ಯಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು. ತಾಯಿ ಹೆಸರಿನಲ್ಲಿ ಮಾಡುವ ಪ್ರತಿಭಾ ಪುರಸ್ಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೃದಯದಿಂದ ಹೃದಯಕ್ಕೆ ಪ್ರೀತಿ ಬೆಸೆಯುವ ಕೆಲಸ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಸಮಾಜಪಯೋಗಿ ಕೆಲಸ ಆತ್ಮ ತೃಪ್ತಿಯಿಂದ ಮಾಡಿದಾಗ ನಾವು ಬಯಸಿದ್ದನ್ನು ಪಡೆಯಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿದ್ದು ಇಂತಹ ನೂರಾರು ಸನ್ಮಾನ ಪಡೆಯುವ ಅರ್ಹತೆ ನಿಮ್ಮದಾಗಲಿ. ನಾಗಮ್ಮ ಪ್ರಕಾಶನ ಸಾಧಕ ವಿದ್ಯಾರ್ಥಿಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದರು.

ಮುಖ್ಯ ಅತಿಥಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ಸಾಧಕ ವಿದ್ಯಾರ್ಥಿಗಳನ್ನು ತನ್ನ ಮನೆಗೆ ಕರೆದು ಹಿರಿಯರಿಂದ ಹೆಗಲಿಗೆ ಶಾಲು ಹಾಕಿ ಗೌರವಿಸಿರುವುದು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ದಾರಿದೀಪನಂತೆ .ವಿದ್ಯಾರ್ಥಿ ಆದವನು ನಿರಂತರ ಪರಿಶ್ರಮದಿಂದ ಮಾತ್ರ ಉನ್ನತ ಸ್ಥಾನಮಾನಕ್ಕೆರಲು ಸಾಧ್ಯ. ಆ ದಿಶೆಯಲ್ಲಿ ನಿರಂತರ ಪ್ರಯತ್ನ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸುದೀಶ ನಾಯ್ಕ ಮಾತನಾಡಿ, ಎಸ್. ಎಸ್. ಎಲ್. ಸಿ.ಯು ವಿದ್ಯಾರ್ಥಿ ಜೀವನದ ಮೊದಲ ಮೆಟ್ಟಿಲು. ಇನ್ನು ತುಂಬಾ ಎತ್ತರಕ್ಕೆ ಬೆಳೆಯಬೇಕಾದ ನೀವು ಸತತ ಅಧ್ಯಯನ ಶೀಲರಾಗಿ ಶ್ರದ್ಧೆ, ಪ್ರಾಮಾಣಿಕ ಪ್ರಯತ್ನದಿಂದ ನಿಮ್ಮ ಬದುಕನ್ನು ಕಟ್ಟಿಕೊಳ್ಳಿ ಎಂದರು. ದೇವಗಿರಿ ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷ ಎಸ್. ಟಿ. ನಾಯ್ಕ ಮಾತನಾಡಿ, ಸಂಘ- ಸಂಸ್ಥೆಗಳಿAದ ಮಾಡಲಾಗದ ಇಂತಹ ಸಂಭ್ರಮದ ಕಾರ್ಯಕ್ರಮ ನಾಗಮ್ಮ ಪ್ರಕಾಶನ ಮೂಲಕ ಪ್ರತಿವರ್ಷ ಸಂಘಟಿಸುತ್ತಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿಗಳ ಉತ್ತಮ ಭವಿಷ್ಯತ್ತ ನಿರ್ಮಾಣಕ್ಕೆ ಇಂತಹ ಪುರಸ್ಕಾರ ಅಡಿಗಲ್ಲು ಎಂದರು.

ಉದ್ಯಮಿ ಸಚಿನ ಎಂ. ನಾಯ್ಕ, ಕೊಂಕಣ ಪ್ರೌಢಶಾಲೆಯ ಪ್ರಾಧ್ಯಾಪಕ ಸುರೇಶ ಹೆಗಡೆ, ಜನತಾ ವಿದ್ಯಾಲಯದ ಪ್ರಾಧ್ಯಾಪಕ ಯೋಗೇಶ ಪಟಗಾರ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪಾಂಡು ಪಟಗಾರ, ದೇವೇಂದ್ರ ಶೇರುಗಾರ, ನಾಗಮ್ಮ ನಾಯ್ಕ ಉಪಸ್ಥಿತರಿದ್ದರು.
ಎಸ್. ಎಸ್. ಎಲ್. ಸಿ. ಯಲ್ಲಿ ವಿಶೇಷ ಸಾಧನೆ ಮಾಡಿದ ದೇವಗಿರಿ ಪಂಚಾಯತ ವಲಯದ ಶುಭಂ ಉದಯ ನಾಯ್ಕ, ಶುಶ್ರಾವ್ಯ ಸುದೀಶ ನಾಯ್ಕ, ಧನುಷ ಗಣೇಶ ವೈದ್ಯ, ಸಾಗರ ತಿಮ್ಮಪ್ಪ ಶೆಟ್ಟಿ, ಗಗನ ಶ್ರೀಕಾಂತ ನಾಯ್ಕ,ನಯನಾ ಬಾಬು ನಾಯ್ಕ ಇವರನ್ನು ಪುರಸ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕ, ತಾಲೂಕಾ ಶಿಕ್ಷಕ ಸಂಘದ ಅಧ್ಯಕ್ಷರಾದ ಸುದೀಶ ನಾಯ್ಕ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ ನಾಯ್ಕರನ್ನು ಪ್ರಕಾಶನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾರಂಭದಲ್ಲಿ ನಾಗಮ್ಮ ಪ್ರಕಾಶನದ ಪಿ. ಆರ್. ನಾಯ್ಕ ಸ್ವಾಗತಿಸಿದರೆ, ಶಿಕ್ಷಕ ಸುರೇಶ ನಾಯ್ಕ ನಿರೂಪಿಸಿ, ವಂದಿಸಿದರು.

About The Author

error: Content is protected !!