May 27, 2026

ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಹೊನ್ನಾವರ ; ತಾಲೂಕಾ ಪಂಚಾಯತ ಸಭಾಂಗಣದಲ್ಲಿ ರಾಜ್ಯದ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆ ಆರಂಭದಲ್ಲಿ ಭಟ್ಕಳ ಹೊಳೆಯಲ್ಲಿ ಮೃತಪಟ್ಟ 11 ಜನರ ಆತ್ಮಕ್ಕೆ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು.

ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ನೋಡಲ್ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು. ಹೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಕೆಪಿಸಿ ಅಧಿಕಾರಿಗಳು ಡ್ಯಾಂ ಭರ್ತಿಯ ಸಂದರ್ಭ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದೆ. ಅನೇಕ ಕಾಮಗಾರಿಗಳಿಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಐದು-ಹತ್ತು ಲಕ್ಷದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವವನು ನಾನಲ್ಲ. ಕೋಟಿಗಟ್ಟಲೆ ಅನುದಾನ ತಂದು ಒಂದೇ ಕಡೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ ಎಂದು ಹೇಳಿದರು.

ಆರೋಗ್ಯ ಇಲಾಖೆ ಚರ್ಚೆಯಲ್ಲಿ ಮಂಕಿ ಆಸ್ಪತ್ರೆಗೆ ಮೂವರು ವೈದ್ಯರು ಹಾಗೂ 24 ಸಿಬ್ಬಂದಿ ನೇಮಕಗೊಂಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ತಾಲೂಕಿನಲ್ಲಿ ಎರಡು ಆರೋಗ್ಯ ಉಪಕೇಂದ್ರಗಳು ಸಿದ್ಧವಾಗಿವೆ ಎಂದು ವೈದ್ಯಾಧಿಕಾರಿ ಡಾ. ವೈಶಾಲಿ ನಾಯ್ಕ ತಿಳಿಸಿದರು. ತಾಲೂಕು ಆಸ್ಪತ್ರೆಯಲ್ಲಿ ಮೂವರು ವೈದ್ಯರ ಕೊರತೆ ಇರುವುದಾಗಿ ಡಾ. ರಾಜೇಶ್ ಕಿಣಿ ಸಭೆಯ ಗಮನಕ್ಕೆ ತಂದರು.

ಯಾವುದೇ ಔಷಧಿಯನ್ನು ಹೊರಗಿನ ಮೆಡಿಕಲ್ ಅಂಗಡಿಗಳಿAದ ಖರೀದಿಸಲು ರೋಗಿಗಳಿಗೆ ಸೂಚಿಸಬಾರದು. ಜನರು ಔಷಧಿಗಾಗಿ ಅಲೆದಾಡುವಂತಾಗಬಾರದು ಎಂದು ಸಚಿವರು ಎಚ್ಚರಿಸಿದರು. ಅಂತಹ ಪ್ರಕರಣಗಳು ಕಂಡುಬAದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ತಾಲೂಕಿನಲ್ಲಿ ಮಂಗನಖಾಯಿಲೆ ಕಾಣಿಸಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಎಂಡೋಸಲ್ಪಾನ್ ಸಮಸ್ಯೆ ಕುರಿತೂ ವಿಸ್ತೃತ ಚರ್ಚೆ ನಡೆಯಿತು.

ಶಿಕ್ಷಣ ಇಲಾಖೆ ಚರ್ಚೆಯಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರನ್ನು ಅಭಿನಂದಿಸಲಾಯಿತು. ತಾಲೂಕಿನಲ್ಲಿ 17 ಶಾಲೆಗಳ ಕೊಠಡಿಗಳು ಹಾಗೂ 15 ಶಾಲೆಗಳ ಮೇಲ್ಚಾವಣಿ ದುರಸ್ತಿ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು. ತೀವ್ರ ಹಾನಿಗೊಳಗಾದ ಶಾಲೆಗಳಿಗೆ ಹೊಸ ಕೊಠಡಿಗಳನ್ನು ನಿರ್ಮಿಸಲು ಸಚಿವರು ಸೂಚಿಸಿದರು.

ಹಡಿನಬಾಳದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಜಾಗದ ಅಗತ್ಯವಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಬೇಡಿಕೆ ಇಟ್ಟರು. ಮೀನುಗಾರಿಕೆಗೆ ತೆರಳಿದ ವೇಳೆ ಮೃತಪಟ್ಟ 20 ಪ್ರಕರಣಗಳಲ್ಲಿ ಇದುವರೆಗೆ ರೂ 1.10 ಕೋಟಿ ಪರಿಹಾರ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ತಾಲೂಕಿನಲ್ಲಿ ಒಂದು ಅಂಗನವಾಡಿ ಶಿಕ್ಷಕಿ ಹಾಗೂ 10 ಸಹಾಯಕರ ಹುದ್ದೆಗಳು ಖಾಲಿ ಇದ್ದು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ ತಿಳಿಸಲಾಯಿತು. 40 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ನಿರಂತರ ವಿದ್ಯುತ್ ಕಡಿತದ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸಾಕಷ್ಟು ಸಿಬ್ಬಂದಿ ಹಾಗೂ ಸಲಕರಣೆಗಳಿದ್ದರೂ ವಿದ್ಯುತ್ ವ್ಯತ್ಯಯ ಏಕೆ ಉಂಟಾಗುತ್ತಿದೆ ಎಂದು ಪ್ರಶ್ನಿಸಿದರು. ಸಾರ್ವಜನಿಕರು 1912 ಹೆಲ್ಪ್ಲೈನ್‌ಗೆ ದೂರು ನೀಡಿದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬಳ್ಕೂರು ಇಡಗುಂಜಿ ರಸ್ತೆ ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಯಾಕೆ ಬ್ಲ್ಯಾಕ್‌ಲಿಸ್ಟ್ ಮಾಡಿಲ್ಲ ಎಂದು ಸಚಿವರು ಪ್ರಶ್ನಿಸಿದರು. ಜಲವಳಕರ್ಕಿ ಬಳ್ಕೂರು ಸೇತುವೆ ಕಾಮಗಾರಿಯ ಪ್ರಗತಿಯ ಕುರಿತೂ ಚರ್ಚೆ ನಡೆಯಿತು. 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಏತನೀರಾವರಿ ಯೋಜನೆಗೆ ಇದೀಗ ರೂ. 113 ಕೋಟಿ ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಲಾಯಿತು.

ಕುಮಟಾ ಹಾಗೂ ಭಟ್ಕಳ ಡಿಪೋಗಳಿಗೆ ಕಳೆದ ಮೂರು ವರ್ಷಗಳಲ್ಲಿ 39 ಹೊಸ ಬಸ್ಸುಗಳು ಬಂದಿದ್ದು, 125 ಸಿಬ್ಬಂದಿ ನೇಮಕಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕೆಪಿಸಿ ಆರಂಭವಾದ 25 ವರ್ಷಗಳಲ್ಲಿ ಯಾವುದೇ ಅನುದಾನ ಬಂದಿರಲಿಲ್ಲ. ಈ ಬಾರಿ ಸಿಎಸ್‌ಆರ್ ಮೂಲಕ ರೂ,4.5 ಕೋಟಿ ಅನುದಾನ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಬಕಾರಿ, ಅಗ್ನಿಶಾಮಕ, ಬಂದರು ಹಾಗೂ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಸಭೆಯಲ್ಲಿ ತಹಶೀಲ್ದಾರ ಪ್ರವೀಣ ಕರಾಂಡೆ, ಆಡಳಿತಾಧಿಕಾರಿ ಎನ್.ಆರ್. ಹೆಗಡೆ, ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟೇಗೌಡ, ಗ್ಯಾರಂಟಿ ಯೋಜನೆ ಅಧ್ಯಕ್ಷ ಅಣ್ಣಪ್ಪ ನಾಯ್ಕ ಸೇರಿದಂತೆ ವಿವಿಧ ನಾಮನಿರ್ದೇಶಿತ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

error: Content is protected !!