May 27, 2026

ಮಾಳ್ಕೋಡ ಶಾಲೆ ಶತಮಾನೋತ್ಸವ ಅಂಗವಾಗಿ ಪೂರ್ವ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನಕ್ಕೆ ಚಾಲನೆ

ಹೊನ್ನಾವರ : ಶಾಲೆ ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಲಿಕಾ ಚಟುವಟಿಕೆಯ ಕೇಂದ್ರ ಮಾತ್ರವಲ್ಲ. ಅದು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಮಹತ್ವದ ಕೇಂದ್ರವಾಗಿದ್ದು, ಊರಿನ ಶಕ್ತಿ ಹಾಗೂ ಸಮೃದ್ಧಿಯ ಸಂಕೇತವೂ ಹೌದು ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜು ಉಜಿರೆ ನಿವೃತ್ತ ಮುಖ್ಯ ಪ್ರಾಧ್ಯಾಪಕ ಭಾಸ್ಕರ ಹೆಗಡೆ ಹೇಳಿದರು.

ಅವರು ತಾಲೂಕಿನ ಮಾಳ್ಕೋಡ ಮಂಕಿಮನೆಯಲ್ಲಿ ನಡೆದ ಮಾಳ್ಕೋಡ ಕೆಳಗಿನ ಇಡಗುಂಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾಳ್ಕೋಡ ಶಾಲೆ ಶತಮಾನೋತ್ಸವದ ಮೈಲುಗಲ್ಲು ದಾಟಿರುವುದು ಗ್ರಾಮಕ್ಕೆ ಹೆಮ್ಮೆಯ ಸಂಗತಿ. ಈ ಕಾರ್ಯಕ್ರಮವನ್ನು ಮನೆಯ ಹಬ್ಬದಂತೆ, ಊರಿನ ಉತ್ಸವದಂತೆ ಆಚರಿಸಬೇಕೆಂಬ ಸಂಕಲ್ಪ ಮಾಡಿದರೆ ಖಂಡಿತ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಈ ಶಾಲೆಯ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸಾಕಷ್ಟು ಶಕ್ತಿ, ಸಾಮರ್ಥ್ಯ ಮತ್ತು ಆಸಕ್ತಿ ಇದೆ. ಎಲ್ಲರೂ ಕೈಜೋಡಿಸಿದರೆ ಅಚ್ಚುಕಟ್ಟಾಗಿ, ಶಿಸ್ತಿನಿಂದ ಹಾಗೂ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ನಡೆಸಲು ಸಾಧ್ಯ. ಇದು ಶಾಲೆಯ ಗುಣಾತ್ಮಕ ಬೆಳವಣಿಗೆಗೂ ಉತ್ತಮ ಅವಕಾಶವಾಗಲಿದೆ ಎಂದು ಹೇಳಿದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಾಲಚಂದ್ರ ಎಂ. ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ ಎಂ. ಶೆಟ್ಟಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಶಾಂತ ಎಚ್. ನಾಯ್ಕ ಹಾಗೂ ಊರಿನ ಹಿರಿಯರಾದ ಮಹಾಬಲ ಶಂಭು ಹೆಗಡೆ ಮಾತನಾಡಿದರು.

ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಗೋಪಾಲ ಜಟ್ಟಿ ನಾಯ್ಕ, ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯ ನಾಯ್ಕ ಹಾಗೂ ಸ್ಥಳೀಯ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ನಾರಾಯಣ ಪಂಡಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಉಪಾಧ್ಯಕ್ಷರಾದ ಜಿ.ಕೆ. ಹೆಗಡೆ, ಶಂಕರ ಗಣಪತಿ ನಾಯ್ಕ, ಜಿ.ಜಿ. ಹೆಗಡೆ, ಪದಾಧಿಕಾರಿಗಳಾದ ಮಂಜುನಾಥ ಕೆ. ನಾಯ್ಕ, ಗಜಾನನ ಎನ್. ಹಳ್ಳೇರ, ಮಾರುತಿ ಎನ್. ನಾಯ್ಕ, ಮಂಜುನಾಥ ಎಸ್. ನಾಯ್ಕ, ಗಣಪತಿ ಎನ್. ನಾಯ್ಕ, ನಾಗೇಶ ಆರ್. ನಾಯ್ಕ, ಕಮಲಾಕಾರ ಎನ್. ನಾಯ್ಕ, ಮಹೇಶ ಜಿ. ನಾಯ್ಕ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಂಜುಳಾ ಹೆಗಡೆ ಪ್ರಾರ್ಥಿಸಿದರು. ಸಮಿತಿಯ ಉಪಾಧ್ಯಕ್ಷ ಜಿ.ಕೆ. ಹೆಗಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ ಜಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಲಕ್ಷ್ಮೀ ಎನ್. ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಮೂರ್ತಿ ಎಂ. ಆಚಾರಿ ವಂದಿಸಿದರು.

ಹಳೆ ವಿದ್ಯಾರ್ಥಿಗಳ ಸಹಕಾರ ಅಗತ್ಯ
ಈ ಸಂದರ್ಭದಲ್ಲಿ ಮಾತನಾಡಿದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ನಾಯ್ಕ, ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿಗಳ ಸಹಕಾರ ಅತ್ಯಂತ ಮುಖ್ಯ. ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಪೂರ್ವ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದೇವೆ. ಎಲ್ಲರನ್ನು ಗುರುತಿಸಿ ಸಮಗ್ರ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯ ನಡೆಸಲಾಗುತ್ತಿದೆ. ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮೇ 31ರಂದು ಬಾಳುಬೆಳೆಯಲ್ಲಿ ಸಂಪರ್ಕ ಅಭಿಯಾನ
ಕೆಳಗಿನ ಇಡಗುಂಜಿಯ ಬಾಳುಬೆಳೆಯ ಶ್ರೀ ಜಟಗನಮನೆ ಆವರಣದಲ್ಲಿ ಮೇ 31ರಂದು ರವಿವಾರ ಮಧ್ಯಾಹ್ನ 3.30ಕ್ಕೆ ಪೂರ್ವ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ ನಡೆಯಲಿದೆ.
ನಿವೃತ್ತ ಸೈನಿಕ ರವಿ ನಾರಾಯಣ ನಾಯ್ಕ ಹಾಗೂ ಪ್ರೌಢಶಾಲಾ ಶಿಕ್ಷಕ ನರಸಿಂಹ ಗಣಪತಿ ನಾಯ್ಕ ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ ನಾಯ್ಕ ಅಧ್ಯಕ್ಷತೆ ವಹಿಸಲಿದ್ದು, ಎಸ್.ಡಿ.ಎಂ.ಸಿ, ಶತಮಾನೋತ್ಸವ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

About The Author

error: Content is protected !!