May 29, 2026

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಶ್ರೀ ಅರುಣಾನಂದ ಸ್ವಾಮೀಜಿ ಸಾಂತ್ವನ

ಭಟ್ಕಳ: ಇತ್ತೀಚೆಗೆ ತಾಲೂಕಿನ ತಟ್ಟೆಹಕ್ಕಲು ಸಮುದ್ರ ದುರಂತದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಶ್ರೀ ಅರುಣಾನಂದ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು. ಮಹಾಕಾಳಿ ಸಂಸ್ಥಾನ ಸದ್ಧರ್ಮ ಪೀಠ ನಿಪ್ಪಾಣಿ ಪೀಠಾಧಿಪತಿಗಳೂ ಹಾಗೂ ಈಡಿಗ ನಾಮಧಾರಿ ಸಮಾಜದ ಗುರುಗಳೂ ಆಗಿರುವ ಶ್ರೀ ಶ್ರೀ ಶ್ರೀ ಅರುಣಾನಂದ ಸ್ವಾಮೀಜಿ ಅವರು ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರ ನೋವಿನಲ್ಲಿ ಭಾಗಿಯಾದರು. ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು.

ಈ ದುರ್ಘಟನೆಯ ವಿಚಾರವನ್ನು ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾಜದ ಎಲ್ಲಾ ಪಂಗಡಗಳ ಸಭೆಯಲ್ಲಿಯೂ ಪ್ರಸ್ತಾಪಿಸಿದ್ದಾಗಿ ಅವರು ತಿಳಿಸಿದರು. ಮೃತರ ಕುಟುಂಬಗಳ ಸಂಕಷ್ಟದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಅವರಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ದೊರಕುವಂತೆ ಪ್ರಯತ್ನಿಸುವ ಭರವಸೆ ನೀಡಿದರು. ಅಲ್ಲದೇ ಮಠದ ವತಿಯಿಂದಲೂ ಅಗತ್ಯ ಸಹಾಯ ಸಹಕಾರ ನೀಡಲಾಗುವುದು ಎಂದು ಸ್ವಾಮೀಜಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸ್ವಾಮೀಜಿಯವರ ಭೇಟಿ ಹಾಗೂ ಸಾಂತ್ವನಕ್ಕೆ ಈಡಿಗ ಸಮಾಜದ ಮುಖಂಡರು ಮತ್ತು ಕುಟುಂಬಸ್ಥರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ನಮ್ಮ ದುಃಖದ ಸಮಯದಲ್ಲಿ ಕುಟುಂಬಗಳ ಮನೆಗಳಿಗೆ ಬಂದು ಧೈರ್ಯ ತುಂಬಿದ ಸ್ವಾಮೀಜಿಯವರಿಗೆ ಸಮಾಜದ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಎಂದು ಅವರು ಹೇಳಿದರು.

About The Author

error: Content is protected !!