ಪೊನ್ನಂಪೇಟೆ: ಇಲ್ಲಿಗೆ ಸಮೀಪದ ಗೋಣಿಕೊಪ್ಪದಲ್ಲಿ ೪೮ನೇ ವರ್ಷದ ಶ್ರೀ ಕಾವೇರಿ ದಸರಾ ಜನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ೧೧ನೇ ವರ್ಷದ ‘ಮಹಿಳಾ ದಸರಾ’ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಮಹಿಳಾ ದಸರಾ ಅಧ್ಯಕ್ಷೆ ಮಂಜುಳಾ ಅವರ ನೇತೃತ್ವದಲ್ಲಿ ನಡೆದ ಈ ಸಂಭ್ರಮದಲ್ಲಿ ನೂರಾರು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡರು.
ಬೆಳಿಗ್ಗೆ ಗೋಣಿಕೊಪ್ಪ ಬಸ್ ನಿಲ್ದಾಣದಿಂದ ನಾಗರಹೊಳೆ ಹಾಡಿಯ ರಮೇಶ್ ಅವರ ವಾದ್ಯಗೋಷ್ಠಿ ಹಾಗೂ ಕಳಸ ಹೊತ್ತ ಮಹಿಳೆಯರ ಆಕರ್ಷಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ರಾಜಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಶ್ರೀ ಕಾವೇರಿ ದಸರಾ ಕಲಾ ವೇದಿಕೆಯಲ್ಲಿ ಮುಕ್ತಾಯಗೊಂಡಿತು. ಬಳಿಕ ಆಯೋಜಿಸಲಾಗಿದ್ದ ಮಹಿಳಾ ಕ್ರೀಡಾಕೂಟಕ್ಕೆ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ ಹಾಗೂ ಗುತ್ತಿಗೆದಾರ ದೇವರಾಜು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್ ಗಣಪತಿ, “ಶಾಸಕ ಎ.ಎಸ್. ಪೊನ್ನಣ್ಣ ಅವರ ಶ್ರಮದಿಂದ ಗೋಣಿಕೊಪ್ಪ ದಸರಾಕ್ಕೆ ೧ ಕೋಟಿ ರೂ. ಅನುದಾನ ದೊರೆತಿದ್ದು, ಕಾರ್ಯಕ್ರಮಗಳ ಯಶಸ್ವಿಗೆ ಪೂರಕವಾಗಿದೆ. ದಸರಾವನ್ನು ರಾಜಕೀಯಾತೀತವಾಗಿ ನಮ್ಮೂರಿನ ಹಬ್ಬವಾಗಿ ಎಲ್ಲರೂ ಸಂಭ್ರಮಿಸಬೇಕು” ಎಂದರು.
ಮಹಿಳಾ ದಸರಾ ಅಧ್ಯಕ್ಷೆ ಮಂಜುಳಾ ಮಾತನಾಡಿ, ಮಹಿಳೆಯರು ದೈನಂದಿನ ಕೆಲಸಗಳನ್ನು ಬದಿಗೊತ್ತಿ ನಿರೀಕ್ಷೆಗೂ ಮೀರಿ ಭಾಗವಹಿಸಿರುವುದು ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂದರು.

ಕ್ರೀಡೆ, ಸಾಂಸ್ಕೃತಿಕ ವೈಭವ ಹಾಗೂ ಖಾದ್ಯ ಮಳಿಗೆಗಳು: ಮಹಿಳೆಯರಿಗಾಗಿ ಥ್ರೋಬಾಲ್, ಹಗ್ಗಜಗ್ಗಾಟ, ‘ಬಾಂಬ್ ಇನ್ ದಿ ಸಿಟಿ’ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ವೇದಿಕೆಯಲ್ಲಿ ನೃತ್ಯ ಮತ್ತು ಛದ್ಮವೇಷ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳೆಯರು ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಖಾದ್ಯ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ದಸರಾಗೆ ವಿಶೇಷ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಶ್ರೀ ಕಾವೇರಿ ದಸರಾ ಸಮಿತಿ ಸಂಯೋಜಕಿ ಶೀಲಾ ಬೋಪಣ್ಣ, ಚಂದನ್ ಕಾಮತ್, ಕಾರ್ಯದರ್ಶಿ ಕಂದಾ ದೇವಯ್ಯ, ಖಜಾಂಚಿ ಧ್ಯಾನ್ ಸುಬ್ಬಯ್ಯ, ಪ್ರಮುಖರಾದ ಧಿನನ್ ಚಂಗಪ್ಪ, ಚಂದನ ಮಂಜುನಾಥ್, ವಾಮನ, ಅಲೀಮಾ, ಕುಸುಮ ಜೋಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ
About The Author


More Stories
ಕೊಡಗಿನ ಪ್ರತಿಷ್ಠಿತ ‘ಗೌರಮ್ಮ ದತ್ತಿ ಪ್ರಶಸ್ತಿ’ಗೆ ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿ ಆಯ್ಕೆ