July 25, 2026

ಎಂದೆಂದಿಗೂ ಡಾ. ಶ್ರೀನಿವಾಸ್ ಅವರೇ ನಮ್ಮ ಶಾಸಕರಾಗಿರಬೇಕು – ಮುಖಂಡ ಇಮಾಮ್ ಸಾಬ್ ಹೆಬ್ಬಯಕೆ

ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲೂಕಿನ ಗಡಿಗ್ರಾಮಗಳಾದ ಪಿಚ್ಚಾರಹಟ್ಟಿ (ಸುಲ್ತಾನಪುರ) ಹಾಗೂ ಪಿಚ್ಚಾರಹಟ್ಟಿ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಪ್ರಸಕ್ತ ಸಾಲಿನಲ್ಲಿ ಹತ್ತಾರು ಲಕ್ಷ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸುವ ಮೂಲಕ ಕ್ಷೇತ್ರದ ಇತಿಹಾಸದಲ್ಲೇ ಕಾಣದ ಪ್ರಗತಿ ತಂದಿದ್ದಾರೆ ಎಂದು ಗ್ರಾಮದ ಹಿರಿಯ ಮುಖಂಡ ದಾವಣಗೆರೆ ಇಮಾಮ್ ಸಾಬ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಗ್ರಾಮದ ಮುಖಂಡರು, ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ತಾಲೂಕಿನ ಗಡಿಭಾಗದ ಹಳ್ಳಿಗಳಿಗೆ ಅತಿ ಹೆಚ್ಚಿನ ಅನುದಾನ ತಂದುಕೊಡುವ ಮೂಲಕ ಹತ್ತಾರು ವರ್ಷಗಳಿಂದ ಕಾಣದಿದ್ದ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ತಲೆಮಾರುಗಳ ಕಾಂಗ್ರೆಸ್ ನಿಷ್ಠೆ

“ನಾವು ಶಾಸಕರ ತಂದೆಯವರಾದ ದಿವಂಗತ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣನವರ ಕಾಲದಿಂದಲೂ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿ ನಿಷ್ಠೆಯಿಂದ ದುಡಿದಿದ್ದೇವೆ. ಜೀವನ ಪರ್ಯಂತ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯಲಿದ್ದೇವೆ. ಮುಂದಿನ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಡಾ. ಎನ್.ಟಿ. ಶ್ರೀನಿವಾಸ್ ಅವರೇ ಶಾಸಕರಾಗಿ ಆಯ್ಕೆಯಾಗಬೇಕು. ಅವರು ನಮ್ಮ ಕ್ಷೇತ್ರದ ಖಾಯಂ ಶಾಸಕರಾಗಿರಬೇಕೆಂಬುದು ಇಡೀ ಗ್ರಾಮಸ್ಥರ ಹೆಬ್ಬಯಕೆಯಾಗಿದೆ.”
– ದಾವಣಗೆರೆ ಇಮಾಮ್ ಸಾಬ್, ಹಿರಿಯ ಮುಖಂಡರು

ಲಕ್ಷಾಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು:

ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೆ ಡಾಂಬರ್ ಹಾಗೂ ಸಿಮೆಂಟ್ ರಸ್ತೆ ಕಾಣದಿದ್ದ ಪಿಚ್ಚಾರಹಟ್ಟಿ ಭಾಗದ ರಸ್ತೆಗಳು ಈಗ ಸುಸಜ್ಜಿತಗೊಂಡಿವೆ. ಗ್ರಾಮದಲ್ಲಿ ನಡೆದಿರುವ ಪ್ರಮುಖ ಕಾಮಗಾರಿಗಳ ವಿವರ ಇಲ್ಲಿದೆ:

ಅಂಗನವಾಡಿ ಕೇಂದ್ರಗಳು: 18 ಲಕ್ಷ ರೂ. ವೆಚ್ಚದಲ್ಲಿ ‘ಎ’ ಕೇಂದ್ರ ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ‘ಬಿ’ ಕೇಂದ್ರದ ಅಂಗನವಾಡಿ ಕಟ್ಟಡಗಳ ನಿರ್ಮಾಣ.

ಸಿಸಿ ರಸ್ತೆಗಳು: 15 ಲಕ್ಷ ರೂ. ವೆಚ್ಚದಲ್ಲಿ 200 ಮೀಟರ್ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ 400 ಮೀಟರ್ ವಿಸ್ತೀರ್ಣದ ಸುಸಜ್ಜಿತ ಸಿಸಿ ರಸ್ತೆಗಳ ನಿರ್ಮಾಣ.

ಶಿಕ್ಷಣಕ್ಕೆ ಒತ್ತು: 12 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆಯ ದುರಸ್ತಿ ಹಾಗೂ ಉನ್ನತೀಕರಣ.

ರಸ್ತೆ ಸಂಪರ್ಕ: ಪಿಚ್ಚಾರಹಟ್ಟಿಯಿಂದ ಕೆಂಚಮಲ್ಲನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸುಗಮ ಸಂಚಾರಕ್ಕಾಗಿ 2 ಲಕ್ಷ ರೂ. ವೆಚ್ಚದಲ್ಲಿ ಜಂಗಲ್ ಕಟಿಂಗ್ ಕಾರ್ಯ.
ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿರುವ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಅನಂತ ಅನಂತ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಗ್ರಾಮದ ಹಿರಿಯ ಮುಖಂಡರಾದ ದಾವಣಗೆರೆ ಇಮಾಮ್ ಸಾಬ್, ಕೆ. ಷಫಿವುಲ್ಲಾ ಹಾಗೂ ಖಾಸೀಂಸಾಬ್ ಮುಂತಾದವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ವಂದೇ ಮಾತರಂ ವಿ.ಜಿ. ವೃಷಭೇಂದ್ರ, ಕೂಡ್ಲಿಗಿ.

About The Author

error: Content is protected !!