ಕೂಡ್ಲಿಗಿ (ವಿಜಯನಗರ): ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಬರಬೇಕಾಗಿದ್ದ ಪರಿಹಾರ ಧನವನ್ನು ವರ್ಷಗಳಾದರೂ ನೀಡದ ಹಿನ್ನೆಲೆಯಲ್ಲಿ, ಘನ ನ್ಯಾಯಾಲಯದ ಆದೇಶದ ಮೇರೆಗೆ ಸಾರಿಗೆ ಸಂಸ್ಥೆಯ ಬಸ್ ಒಂದನ್ನು ಜಪ್ತಿ ಮಾಡಿರುವ ಅಪರೂಪದ ಪ್ರಸಂಗ ಜುಲೈ 17ರಂದು ಕೂಡ್ಲಿಗಿ ಪಟ್ಟಣದಲ್ಲಿ ಜರುಗಿದೆ.
ಸಂತ್ರಸ್ತರ ಪರ ವಕೀಲರ ನೇತೃತ್ವದಲ್ಲಿ ನ್ಯಾಯಾಲಯದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬಸ್ ನಿಲ್ದಾಣಕ್ಕೆ ಬಂದಿದ್ದ ಸಾರಿಗೆ ಬಸ್ಸನ್ನು ಜಪ್ತಿ ಮಾಡಿ ನ್ಯಾಯಾಲಯದ ಆವರಣಕ್ಕೆ ತಂದಿ ನಿಲ್ಲಿಸಿದ್ದಾರೆ.
ಭೀಕರ ಅಪಘಾತದ ಹಿನ್ನೆಲೆ:
ಘಟನೆ ನಡೆದ ದಿನಾಂಕ: 10 ನವೆಂಬರ್ 2019 ತಾಲ್ಲೂಕಿನ ಕ್ಯಾಸನಕೇರಿ ಗ್ರಾಮದ ನಾಗಪ್ಪ (55) ಎಂಬುವವರು ಟಾಟಾ ಏಸ್ ಆಟೋದಲ್ಲಿ ಹೊಸಪೇಟೆಯಿಂದ ಕೂಡ್ಲಿಗಿ ಕಡೆಗೆ ಬರುತ್ತಿದ್ದರು. ಈ ವೇಳೆ ಶಿವಪುರ ಗ್ರಾಮದ ಬಳಿ ಎದುರಿನಿಂದ ಬಂದ ಕೊಪ್ಪಳ ಡಿಪೋಗೆ ಸೇರಿದ ಸಾರಿಗೆ ಬಸ್ ಮುಖಾಮುಖಿ ಡಿಕ್ಕಿಯಾಗಿತ್ತು. ಈ ಭೀಕರ ಅಪಘಾತದ ಪರಿಣಾಮ ನಾಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು.
ನ್ಯಾಯಾಲಯದ ಮೊರೆ: ಮೃತನ ಪತ್ನಿ ಕೊಟ್ರಮ್ಮ ಅವರು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ವಕೀಲರಾದ ಜಿ. ಸೀತಾರಾಮಗೌಡರ ಮೂಲಕ ಸೂಕ್ತ ಪರಿಹಾರಕ್ಕಾಗಿ ಕೂಡ್ಲಿಗಿ ನ್ಯಾಯಾಲಯದ ಮೊರೆ ಹೋಗಿದ್ದರು.
₹12 ಲಕ್ಷ ಪರಿಹಾರಕ್ಕೆ ಆದೇಶಿಸಿದ್ದ ನ್ಯಾಯಾಲಯ:

ಸುದೀರ್ಘ ವಿಚಾರಣೆಯ ಬಳಿಕ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯವು 16 ಅಕ್ಟೋಬರ್ 2020 ರಂದೇ ಮಹತ್ತರ ತೀರ್ಪು ನೀಡಿತ್ತು. ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡು ನೊಂದಿದ್ದ ಕುಟುಂಬಕ್ಕೆ ₹12 ಲಕ್ಷ ಪರಿಹಾರ ನೀಡುವಂತೆ ಕೆಎಸ್‌ಆರ್‌ಟಿಸಿ (KSRTC) ಕೊಪ್ಪಳ ಡಿಪೋಗೆ ಆದೇಶಿಸಿತ್ತು.
ಜಪ್ತಿಗೆ ಕಾರಣ: ನ್ಯಾಯಾಲಯ ಆದೇಶ ಹೊರಡಿಸಿ ಐದಾರು ವರ್ಷಗಳೇ ಕಳೆದರೂ ಸಾರಿಗೆ ಸಂಸ್ಥೆಯು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಹಣವನ್ನು ಪಾವತಿಸಿರಲಿಲ್ಲ. ಇದರಿಂದ ಬೇಸತ್ತ ಸಂತ್ರಸ್ತರ ಪರ ವಕೀಲರು ಜಪ್ತಿಗಾಗಿ ಪುನಃ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ಕೂಡ್ಲಿಗಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಜೆ. ಯೋಗೇಶ್ ಅವರು ಬಸ್ ಜಪ್ತಿ ಮಾಡಲು ಕಡಕ್ ಆದೇಶ ಹೊರಡಿಸಿದರು.
ಬಸ್ ನಿಲ್ದಾಣದಲ್ಲೇ ಜಪ್ತಿ ಕಾರ್ಯಾಚರಣೆ:
ನ್ಯಾಯಾಲಯದ ಆದೇಶದ ಬೆನ್ನಲ್ಲೇ ಜುಲೈ 17ರಂದು ಕೊಪ್ಪಳ ಡಿಪೋಗೆ ಸೇರಿದ ಸಾರಿಗೆ ಬಸ್ ಕೂಡ್ಲಿಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ, ವಕೀಲರಾದ ಜಿ. ಸೀತಾರಾಮಗೌಡ ಹಾಗೂ ನ್ಯಾಯಾಲಯದ ಅಮೀನದಾರ್ ಸಿಬ್ಬಂದಿಯವರಾದ ಕೊಟ್ರೇಶ, ನಾಗರಾಜ ಮತ್ತು ಶೇಖ್ ಅಬೂಬಕರ್ ಅವರು ಕಾನೂನು ರೀತ್ಯಾ ಬಸ್ಸನ್ನು ವಶಕ್ಕೆ ಪಡೆದು ನ್ಯಾಯಾಲಯದ ಆವರಣಕ್ಕೆ ತಂದಿದ್ದಾರೆ.
ಈ ಸಂದರ್ಭದಲ್ಲಿ ವಕೀಲರಾದ ಜಿ. ಸೀತಾರಾಮಗೌಡ, ಜಿ.ಎಂ. ಮಲ್ಲಿಕಾರ್ಜುನಯ್ಯ, ಸಂತ್ರಸ್ತೆ ಕ್ಯಾಸನಕೇರಿ ಕೊಟ್ರಮ್ಮ, ಅವರ ಸಂಬಂಧಿಕರು ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.
– ವರದಿ: ವಂದೇ ಮಾತರಂ ವಿ.ಜಿ. ವೃಷಭೇಂದ್ರ, ಕೂಡ್ಲಿಗಿ
About The Author


More Stories
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲೇ ‘ತಾಯಿ-ಮಕ್ಕಳ ಆಸ್ಪತ್ರೆ’ ನಿರ್ಮಾಣಕ್ಕೆ ಸಾರ್ವಜನಿಕರ ಒತ್ತಾಯ – ಶಾಸಕರ ನಿರ್ಧಾರಕ್ಕೆ ಶ್ಲಾಘನೆ
ಶೇ. 33 ಮೀಸಲಾತಿ ನಮ್ಮ ಹಕ್ಕು: ಕೂಡ್ಲಿಗಿಯಲ್ಲಿ ಜನವಾದಿ ಮಹಿಳಾ ಸಂಘದಿಂದ ಬೃಹತ್ ಪ್ರತಿಭಟನೆ ಹಾಗೂ ಹಕ್ಕೊತ್ತಾಯ
ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಸಂಘಟನಾ ಚತುರ, ಅತ್ಯಂತ ಜನಪ್ರಿಯ ಮಾದರಿ ಶಾಸಕ: ಹರ್ಕರ್ ವೇಣುಗೋಪಾಲ್ ರಾವ್ ಬಣ್ಣನೆ