

ಅಥಣಿ: ರಾಜ್ಯ ಸರ್ಕಾರ ವಿದ್ಯುತ್ ಕ್ಷೇತ್ರದ ಖಾಸಗೀಕರಣದ ಯಾವುದೇ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಅಥಣಿ ತಾಲೂಕಿನ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಜಿ.ವಿ. ಸಂಪನ್ನವರ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಪ್ರವೀಣ ನಾಯಿಕ, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಿದರೆ ರೈತರಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೇರಿದಂತೆ ವಿವಿಧ ರಿಯಾಯಿತಿಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಖಾಸಗಿ ಕಂಪನಿಗಳು ಲಾಭದ ಉದ್ದೇಶದಿಂದ ಕಾರ್ಯನಿರ್ವಹಿಸುವುದರಿಂದ ವಿದ್ಯುತ್ ದರದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಲಿದ್ದು, ಪ್ರಸ್ತುತ ವಿದ್ಯುತ್ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರ ಉದ್ಯೋಗಕ್ಕೂ ಧಕ್ಕೆ ಉಂಟಾಗಲಿದೆ ಎಂದು ಹೇಳಿದರು.

ಸಾರ್ವಜನಿಕರು, ರೈತರು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಬಾರದು. ಈ ಕುರಿತು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಖಾಸಗೀಕರಣದತ್ತ ಮುಂದಾದರೆ ಉಗ್ರ ಹೋರಾಟ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಮನವಿಯನ್ನು ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ರವಾನಿಸಿ ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅನಿಲ್ ಬಾಮನೆ, ಶರಣಪ್ಪ ಶಿಂಧೆ, ಎಂ. ಶರ್ಮಾ, ಕಿರಣ ಪಾಟೋಳೆ, ಮಹಾದೇವ ನಿಕ್ಕಂ, ಮಲ್ಲೇಶ ಪಡಸಲಗಿ, ಪ್ರಕಾಶ ಪೂಜಾರಿ, ಎಂ.ಸಿ. ತಾಂಬೋಳಿ, ಅಮೂಲ ಚವಾಣ, ಶಿವಾನಂದ ನಾವಿ, ಅಶೋಕ ಬಡಿಗೇರ, ಸರಸ್ವತಿ ನೇಮಗೌಡ, ಕವಿತಾ ಭೋಸಲೆ, ಶಾಂತಾ ಶಿಂಧೆ, ಉಜ್ವಲ ಪಾಟೋಳೆ, ರೇಷ್ಮಾ ತೇಲಿ ಹಾಗೂ ಸಾವಿತ್ರಿ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಮಹೇಶ ಶರ್ಮ
About The Author




More Stories
ಅಥಣಿಯ ಶಿವಯೋಗಿ ನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಾವ: ಹೆದ್ದಾರಿಯಲ್ಲಿ ‘ಸ್ಪೀಡ್ ಬ್ರೇಕರ್’, ಶಾಲಾ ಮೇಲ್ದರ್ಜೆಗೆ ಸ್ಥಳೀಯರ ಉಗ್ರ ಆಗ್ರಹ.
ಅಥಣಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ರಾಜು ಡವರಿ ಅವರಿಂದ ಧ್ವಜಾರೋಹಣ
ಮದಭಾವಿಯಲ್ಲಿ ಸಡಗರದ ಸ್ವಾತಂತ್ರ್ಯ ದಿನಾಚರಣೆ: ವೀರಯೋಧರಿಂದ ಜಂಟಿ ಧ್ವಜಾರೋಹಣ