November 22, 2026

ಮಣಿಪುರದಲ್ಲಿ ಕರ್ತವ್ಯದ ವೇಳೆ ಮೃತಪಟ್ಟ ಯೋಧ ಗಿರೀಶ ನಾಯ್ಕ ಮನೆಗೆ ಬಿಜೆಪಿ ಮುಖಂಡರ ಭೇಟಿ, ಸಾಂತ್ವನ

ದೇಶ ಕಾಯುವ ಸೈನಿಕರ ತ್ಯಾಗ ಸ್ಮರಣೀಯ; ಶೋಕಸಾಗರದಲ್ಲಿ ಮುಳುಗಿರುವ ಪೋಷಕರಿಗೆ ಧೈರ್ಯ ತುಂಬಿದ ಅನಂತಮೂರ್ತಿ ಹೆಗಡೆ

ಶಿರಸಿ (ಉತ್ತರ ಕನ್ನಡ): ಮಣಿಪುರದಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಿಧನರಾದ ಶಿರಸಿ ತಾಲೂಕಿನ ಗಣಗೇರಿ ಗ್ರಾಮದ ಯೋಧ ಗಿರೀಶ ಭಾಸ್ಕರ ನಾಯ್ಕ ಅವರ ನಿವಾಸಕ್ಕೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಸ್ಥಳೀಯ ಮುಖಂಡ ಪ್ರಸನ್ನ ಹೆಗಡೆ ಹೊಳೆಬೈಲ್ ಭೇಟಿ ನೀಡಿ, ಮೃತ ಯೋಧನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ತಮ್ಮ ಕಡೆಯಿಂದ ಆರ್ಥಿಕ ನೆರವು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, “ಅಗ್ನಿಪತ್ ಯೋಜನೆಯಡಿ (Agniveer) ಆಯ್ಕೆಗೊಂಡು ಮಣಿಪುರದಲ್ಲಿ ದೇಶಸೇವೆ ಸಲ್ಲಿಸುತ್ತಿದ್ದ ಹೆಮ್ಮೆಯ ವೀರ ಯೋಧ ಗಿರೀಶ ಭಾಸ್ಕರ ನಾಯ್ಕ ಅವರ ಅಕಾಲಿಕ ಅಗಲಿಕೆ ಅತ್ಯಂತ ನೋವಿನ ಸಂಗತಿ. ಗಾಳಿ, ಮಳೆ, ಚಳಿ ಎನ್ನದೆ ಹಗಲಿರುಳು ಗಡಿಯಲ್ಲಿ ಯೋಧರು ದೇಶ ಕಾಯುತ್ತಿರುವುದರಿಂದಲೇ ನಾವು ದೇಶದೊಳಗೆ ನೆಮ್ಮದಿಯಿಂದಿರಲು ಸಾಧ್ಯವಾಗಿದೆ” ಎಂದರು.

“ಮೃತ ಯೋಧ ಗಿರೀಶ ಅವರ ತಂದೆ ಭಾಸ್ಕರ ನಾಯ್ಕ ಹಾಗೂ ತಾಯಿ ರೇವತಿ ನಾಯ್ಕ ಅವರು ಇಂತಹ ದೇಶಪ್ರೇಮಿ ಪುತ್ರನನ್ನು ದೇಶದ ರಕ್ಷಣೆಗೆ ಸಮರ್ಪಿಸಿರುವುದು ಹೆಮ್ಮೆಯ ವಿಷಯ. ಯೋಧನ ಅಗಲಿಕೆ ಕೇವಲ ಪೋಷಕರಿಗಷ್ಟೇ ಅಲ್ಲ, ಇಡೀ ನಾಡಿಗೆ ತೀವ್ರ ದುಃಖ ತಂದಿದೆ. ಭಗವಂತ ಈ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಸಂಕಷ್ಟದ ಈ ಸಮಯದಲ್ಲಿ ನಾವೆಲ್ಲರೂ ಸದಾ ನಿಮ್ಮೊಂದಿಗೆ ಇರುತ್ತೇವೆ” ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜಗದೀಶ ರೆಡ್ಡಿ, ನಾಗರಾಜ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಗ್ರಾಮದ ಸ್ಥಳೀಯ ಹಿರಿಯರು ಉಪಸ್ಥಿತರಿದ್ದು ಮೃತ ಯೋಧನಿಗೆ ನಮನ ಸಲ್ಲಿಸಿದರು.

About The Author

error: Content is protected !!