June 24, 2026

ಹೆರಿಗೆ ವೈದ್ಯರ ಕೊರತೆಯಿಂದ ತಾಲೂಕು ಆರೋಗ್ಯ ವ್ಯವಸ್ಥೆ ‘ಐಸಿಯು’ಗೆ! ಬಡ ಕುಟುಂಬಗಳಲ್ಲಿ ಹೆಚ್ಚಿದ ಆತಂಕ

ಭಟ್ಕಳ: ತಾಲೂಕಿನ ಗ್ರಾಮೀಣ ಭಾಗದ ಬಡವರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನಾಡಿಯಾಗಿದ್ದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ತಜ್ಞ ವೈದ್ಯರ ಕೊರತೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ತಾಲೂಕು ಆಸ್ಪತ್ರೆ ಹಾಗೂ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ತಜ್ಞರಿಲ್ಲದೇ ಗರ್ಭಿಣಿಯರು ಹೆರಿಗೆಗಾಗಿ ನೆರೆಹೊರೆಯ ಹೊನ್ನಾವರ ಅಥವಾ ದುಬಾರಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಭಟ್ಕಳ ತಾಲೂಕು ಆಸ್ಪತ್ರೆ: ಖಾಲಿ ಹುದ್ದೆಗಳ ಸುರಿಮಳೆ

ಭಟ್ಕಳದ ಪ್ರಮುಖ ತಾಲೂಕು ಆಸ್ಪತ್ರೆಯಲ್ಲೇ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಎದ್ದು ಕಾಣಿಸುತ್ತಿದೆ.

ವೈದ್ಯರ ಕೊರತೆ: ಮಂಜೂರಾದ 15 ವೈದ್ಯರ ಹುದ್ದೆಗಳ ಪೈಕಿ ಕೇವಲ 9 ಮಂದಿ ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ಥಗಿತಗೊಂಡ ಹೆರಿಗೆ ಸೇವೆ: ಕಳೆದ ಒಂದೂವರೆ ವರ್ಷಗಳಿಂದ ಸ್ತ್ರೀರೋಗ ತಜ್ಞರ (Gynecologist) ಹುದ್ದೆ ಖಾಲಿ ಇರುವುದರಿಂದ, ತಿಂಗಳಿಗೆ ಸರಾಸರಿ 60ರಿಂದ 70 ಹೆರಿಗೆಗಳಾಗುತ್ತಿದ್ದ ಆಸ್ಪತ್ರೆಯಲ್ಲಿ ಹೆರಿಗೆ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ.

ಇತರ ಪ್ರಮುಖ ಕೊರತೆಗಳು: ಕಣ್ಣಿನ ವೈದ್ಯರು ಹಾಗೂ ತುರ್ತು ಚಿಕಿತ್ಸಾ ವಿಭಾಗದ (Emergency) 4 ವೈದ್ಯರ ಹುದ್ದೆಗಳು ಖಾಲಿ ಇವೆ. ನಿಯಮದ ಪ್ರಕಾರ ಇರಬೇಕಾದ ಹೆಚ್ಚುವರಿ ಅರಿವಳಿಕೆ ತಜ್ಞರ (Anesthetist) ನೇಮಕಾತಿಯೂ ಆಗಿಲ್ಲ.

ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೂ ವರ್ಗಾವಣೆ ಬಿಸಿ

ತಿಂಗಳಿಗೆ ಸರಾಸರಿ 70ರಿಂದ 80 ಹೆರಿಗೆಗಳಾಗುತ್ತಿದ್ದ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದ ಪರಿಸ್ಥಿತಿಯೂ ಈಗ ಹದಗೆಟ್ಟಿದೆ. ಜೂನ್ 5ರಂದು ನಡೆದ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಹೆರಿಗೆ ತಜ್ಞರು, ಅರಿವಳಿಕೆ ತಜ್ಞರು ಹಾಗೂ ಮಕ್ಕಳ ತಜ್ಞರು ಒಟ್ಟಿಗೆ ಬೇರೆಡೆಗೆ ವರ್ಗಾವಣೆಯಾಗಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಗರ್ಭಿಣಿಯರು ಇದ್ದಕ್ಕಿದ್ದಂತೆ ಕತ್ತಲಿಗೆ ತಳ್ಳಲ್ಪಟ್ಟಂತಾಗಿದ್ದಾರೆ.

ನರ್ಸಿಂಗ್ ಹಾಗೂ ಸಿಬ್ಬಂದಿ ಕೊರತೆಯ ಅಂಕಿ-ಅಂಶಗಳು

ಆಸ್ಪತ್ರೆಯ ದೈನಂದಿನ ಕಾರ್ಯನಿರ್ವಹಣೆಗೆ ಬೇಕಾದ ಸಿಬ್ಬಂದಿಗಳೂ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ: ದಾದಿಯರು (Nurses) ಮಂಜೂರಿ18 ಕಾಲಿ 07 ಕಚೇರಿ ಸಿಬ್ಬಂದಿ ಮಂಜೂರಿ 07 ಕಾಲಿ 05 ಪ್ರಯೋಗಾಲಯ (Lab) ಕಾಲಿ 02 ಔಷಧ ವಿತರಣೆ (Pharmacy) ಕಾಲಿ 02

ಕಚೇರಿ ಸಿಬ್ಬಂದಿ ಕೊರತೆಯಿಂದಾಗಿ ಬೇರೆ ವಿಭಾಗಗಳ ಸಿಬ್ಬಂದಿಯನ್ನು ನಿಯೋಜಿಸಿ ಸದ್ಯಕ್ಕೆ ಹೇಗೋ ಕೆಲಸ ಸರಿದೂಗಿಸಲಾಗುತ್ತಿದೆ.

ಬಡ ರೋಗಿಗಳಿಗೆ ಆರ್ಥಿಕ ಹೊರೆ: ಸಾರ್ವಜನಿಕರ ಆಕ್ರೋಶ

ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸಾ ವೆಚ್ಚವನ್ನು ಭರಿಸಲು ಸಾಧ್ಯವಾಗದ ಸಾವಿರಾರು ಬಡ ಕುಟುಂಬಗಳಿಗೆ ಈ ಎರಡೂ ಸರ್ಕಾರಿ ಆಸ್ಪತ್ರೆಗಳು ಆಸರೆಯಾಗಿದ್ದವು. ಆದರೆ ಈಗ ತುರ್ತು ಸಂದರ್ಭಗಳಲ್ಲಿ ಹೊನ್ನಾವರಕ್ಕೆ ಓಡಬೇಕಾಗಿದ್ದರಿಂದ ಆಂಬ್ಯುಲೆನ್ಸ್ ಹಾಗೂ ಇತರೆ ಹೆಚ್ಚುವರಿ ವೆಚ್ಚದ ಭೀತಿ ಎದುರಾಗಿದೆ.
ತಕ್ಷಣವೇ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಜಾಗೃತಗೊಂಡು ಭಟ್ಕಳ ತಾಲೂಕು ಆಸ್ಪತ್ರೆ ಮತ್ತು ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ಹಾಗೂ ಹೆರಿಗೆ ತಜ್ಞರನ್ನು ನೇಮಕ ಮಾಡಬೇಕು ಎಂದು ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳು ತೀವ್ರವಾಗಿ ಆಗ್ರಹಿಸಿವೆ.

About The Author

error: Content is protected !!