June 23, 2026

ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಕಾರ್ಯಾಲಯಕ್ಕೆ ರಾಜ್ಯಾಧ್ಯಕ್ಷರ ಭೇಟಿ; ಭ್ರಷ್ಟಾಚಾರದ ವಿರುದ್ಧ ಕಠಿಣ ಎಚ್ಚರಿಕೆ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧುಬಾವಿ ಗ್ರಾಮದಲ್ಲಿರುವ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಕಾರ್ಯಾಲಯಕ್ಕೆ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಬಿ. ಎಚ್. ಜಮಾದಾರ ಅವರು ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಘಟಕ ಹಾಗೂ ಮಹಿಳಾ ಘಟಕದ ವತಿಯಿಂದ ರಾಜ್ಯಾಧ್ಯಕ್ಷರನ್ನು ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.


ಇದೇ ವೇಳೆ ಅಥಣಿ ತಾಲೂಕು ಮಹಿಳಾ ಘಟಕದ ವತಿಯಿಂದ ಸಂಸ್ಥೆಯ ರಾಜ್ಯ ಸಂಚಾಲಕರಾದ ರೇಣುಕಾ ಹೊಸೂರ ಅವರಿಗೂ ಸಹ ಶಾಲೂ ಹೊದಿಸಿ ಸನ್ಮಾನಿಸಲಾಯಿತು. ಶಕ್ತಿದಳದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ನಿರುದ್ಯೋಗ ನಿವಾರಣೆಯೇ ಸಂಸ್ಥೆಯ ಗುರಿ:

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ. ಎಚ್. ಜಮಾದಾರ ಅವರು, “ನಮ್ಮ ಸಂಸ್ಥೆಯ ಮುಖ್ಯ ಗುರಿ ನಿರುದ್ಯೋಗ ನಿವಾರಣೆಯಾಗಿದೆ. ಸಂಸ್ಥೆಯು ಹಮ್ಮಿಕೊಳ್ಳುವ ವಿವಿಧ ಕಲ್ಯಾಣ ಯೋಜನೆಗಳನ್ನು ಸದಸ್ಯರೆಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಈ ಎಲ್ಲಾ ಯೋಜನೆಗಳ ಲಾಭ ಮತ್ತು ಸೌಲಭ್ಯಗಳು ಕೇವಲ ಸಂಸ್ಥೆಯ ನೋಂದಾಯಿತ ಸದಸ್ಯರಿಗೆ ಮಾತ್ರ ಲಭ್ಯವಿರಲಿವೆ” ಎಂದು ತಿಳಿಸಿದರು.

ಭ್ರಷ್ಟಾಚಾರ ಎಸಗಿದರೆ ಸದಸ್ಯತ್ವ ರದ್ದು – ಕಠಿಣ ಎಚ್ಚರಿಕೆ:

ಇದೇ ಸಂದರ್ಭದಲ್ಲಿ ಸದಸ್ಯರಿಗೆ ಕಠಿಣ ಎಚ್ಚರಿಕೆ ನೀಡಿದ ರಾಜ್ಯಾಧ್ಯಕ್ಷರು, “ಸಂಸ್ಥೆಯ ಪದಾಧಿಕಾರಿಗಳು ಅಥವಾ ಸದಸ್ಯರು ಯಾವುದೇ ರೀತಿಯ ತಪ್ಪು ಎಸಗಿದರೂ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಸಂಸ್ಥೆಯ ಹೆಸರಿಗೆ ಕಪ್ಪು ಚುಕ್ಕೆ ತರಲು ಯತ್ನಿಸಿದರೆ, ಅಂತಹವರ ಸದಸ್ಯತ್ವವನ್ನು ತಕ್ಷಣವೇ ರದ್ದುಗೊಳಿಸಲಾಗುವುದು. ಅಷ್ಟೇ ಅಲ್ಲದೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿದರು.

ಶಿಸ್ತುಬದ್ಧ ಸೇವೆಗೆ ತಾಲೂಕು ಮುಖ್ಯಸ್ಥರ ಬದ್ಧತೆ:

ಬಳಿಕ ಮಾತನಾಡಿದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ತಾಲೂಕು ಘಟಕದ ಮುಖ್ಯಸ್ಥರಾದ ಪ್ರವೀಣ್ ನಾಯಕ್ ಅವರು, “ರಾಜ್ಯಾಧ್ಯಕ್ಷರ ಆದೇಶ ಮತ್ತು ಮಾರ್ಗದರ್ಶನದಂತೆ ನಮ್ಮ ತಾಲೂಕು ಘಟಕವು ಅತ್ಯಂತ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಲಿದೆ. ಸಂಸ್ಥೆಯ ಕೀರ್ತಿಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ನಾವು ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಸೃಷ್ಟಿ ನಾಯಕ್ ಅವರು ಎಲ್ಲರನ್ನೂ ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.


ಸಮಾರಂಭದಲ್ಲಿ ಪ್ರಮುಖರಾದ ಮುತ್ತಣ್ಣ ಕರಾಳಿ, ರಾಜು ಸಿಂದಗಿ, ಶರಣಪ್ಪ ಶಿಂಧೆ, ಅನಿಲ್ ಭಾಮನೆ, ಎಂ. ಶರ್ಮಾ, ಮಹಾದೇವ ನಾಯಕ್, ಅಮೂಲ್ ಚವಾಣ್, ಆದಿತ್ಯ ನಾಯಕ್, ಸರಸ್ವತಿ ನ್ಯಾಮಗೌಡ, ಕವಿತಾ ಬೋಸ್ಲೆ, ರಂಜಾನ್ ಮುಲ್ಲಾ, ಶಾಂತಾ ಶಿಂಧೆ, ರೇಷ್ಮಾ ತೇಲಿ, ಸಾವಿತ್ರಿ ಬಡಿಗೇರ, ಅಶೋಕ್ ಬಡಿಗೇರ ಸೇರಿದಂತೆ ಸಂಸ್ಥೆಯ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಹೇಶ್ ಶರ್ಮಾ

About The Author

error: Content is protected !!