

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ನೂತನವಾಗಿ ಸರ್ಕಾರಿ ಕನ್ನಡ ಪ್ರೌಢಶಾಲೆಯನ್ನು ಪ್ರಾರಂಭಿಸಬೇಕು ಹಾಗೂ ಅನುದಾನಿತ ಶಾಲೆಗಳ ಫೀಸ್ ದಂದೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಹಾಗೂ ಸಾಮಾಜಿಕ ಹೋರಾಟಗಾರ ಪ್ರವೀಣ ನಾಯಿಕ ಅವರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ (BEO) ಎಂ. ಆರ್. ಮುಂಜೆ ಅವರ ಅನುಪಸ್ಥಿತಿಯಲ್ಲಿ ಶಿಕ್ಷಣ ಇಲಾಖೆಯ ಅಧೀಕ್ಷಕರಾದ ಎಸ್. ಎಚ್. ಖಡಾಖಡಿ ಹಾಗೂ ಬಿಆರ್‌ಸಿ ಜಿ. ಆರ್. ಕೋತ ಅವರಿಗೆ ಹಕ್ಕೊತ್ತಾಯದ ಮನವಿ ಪತ್ರವನ್ನು ಹಸ್ತಾಂತರಿಸಲಾಯಿತು.

ಖಾಸಗಿ ಶಾಲೆಗಳ ದುಬಾರಿ ಫೀಸ್: ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ
ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣ ನಾಯಿಕ, “ಮದಭಾವಿ ಗ್ರಾಮವು ಸುಮಾರು 10 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳಿದ್ದರೂ, ಮದಭಾವಿ ಗ್ರಾಮದಲ್ಲಿ ಮಾತ್ರ ಇಲ್ಲದಿರುವುದು ದುರದೃಷ್ಟಕರ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಇಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದ ಕಾರಣ, ಖಾಸಗಿ ಶಾಲೆಗಳಿಗೆ ದುಬಾರಿ ಹಣ ತುಂಬಲಾಗದೆ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣವೇ ಇಲ್ಲಿ ಸರ್ಕಾರಿ ಕನ್ನಡ ಪ್ರೌಢಶಾಲೆ ಆರಂಭಿಸಬೇಕು” ಎಂದು ಒತ್ತಾಯಿಸಿದರು.

ಅನುದಾನಿತ ಶಾಲೆಗಳ ವಿರುದ್ಧ ಕ್ರಮಕ್ಕೆ ಎಚ್ಚರಿಕೆ
ಫೀಸ್ ರಿಫಂಡ್ ಮಾಡಲು ಆಗ್ರಹ: ಪ್ರತಿವರ್ಷ ಅನುದಾನಿತ ಶಾಲೆಗಳಲ್ಲಿ ನಿಯಮಬಾಹಿರವಾಗಿ ಪ್ರವೇಶ ಪ್ರಕ್ರಿಯೆ ಶುಲ್ಕವನ್ನು (ಅಡ್ಮಿಷನ್ ಫೀಸ್) ಹೆಚ್ಚಳ ಮಾಡಲಾಗುತ್ತಿದೆ. ಇಲಾಖೆಯು ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿರುವ ಹಣವನ್ನು ತಕ್ಷಣವೇ ‘ರಿಫಂಡ್’ (ಮರುಪಾವತಿ) ಮಾಡಿಸಬೇಕು. ಇಲ್ಲದಿದ್ದರೆ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದೇ ವೇಳೆ, ದೇಶದ ಬೆನ್ನೆಲುಬಾಗಿರುವ ರೈತರ ಜ್ವಲಂತ ಸಮಸ್ಯೆಗಳ ಕಡೆಗೂ ಸಂಬಂಧಪಟ್ಟ ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳು ಸೇರಿದಂತೆ ಇಡೀ ವ್ಯವಸ್ಥೆಯು ಗಮನಹರಿಸಿ ಶೀಘ್ರ ಪರಿಹಾರ ನೀಡಲು ಮುಂದಾಗಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಶರಣಪ್ಪ, ಪ್ರಮುಖರಾದ ಅನಿಲ ಭಾಮನೆ, ಕಿರಣ ಪಾಟೋಳೆ, ಎಂ. ಶರ್ಮಾ, ಕವಿತಾ ಭೋಸಲೆ, ರಂಜಾನ್ ಮುಲ್ಲಾ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ವರದಿ : ಮಹೇಶ ಶರ್ಮ
About The Author




More Stories
ಕೂಡ್ಲಿಗಿಯಲ್ಲಿ ಒಣಗಿದ ಬೆಳೆ ವೀಕ್ಷಿಸಿದ ಸಚಿವ ಜಮೀರ್: ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಶಿಫಾರಸು ಭರವಸೆ
ಅಥಣಿ ಬೆನ್ನೇಪೇಟೆಯಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದೆ ಪರದಾಟ: ಶಾಸಕ ಲಕ್ಷ್ಮಣ್ ಸವದಿಗೆ ಜೆಡಿಎಸ್ ಮುಖಂಡ ಇಮ್ತಿಯಾಜ್ ಹಿಪ್ಪರಗಿ ಮನವಿ
ಅಪಾಯಕಾರಿ ಚರಂಡಿ ಮುಚ್ಚಳಿಕೆ ಸರಿಪಡಿಸಲು ಆಗ್ರಹ — ಪುರಸಭೆ ಹಾಗೂ ತಹಶೀಲ್ದಾರರಿಗೆ ಮತ್ತೆ ಮನವಿ