June 26, 2026

ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿಯ ಬಂಧನ, ₹4.50 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಭಟ್ಕಳ: ನಗರದ ಕಿದ್ವಾಯಿ ರಸ್ತೆಯಲ್ಲಿ ಇತ್ತೀಚೆಗೆ ನಡೆದಿದ್ದ ಸರಣಿ ಕಳ್ಳತನದ ಬೆನ್ನತ್ತಿದ ಭಟ್ಕಳ ನಗರ ಠಾಣೆ ಪೊಲೀಸರು, ಪ್ರಕರಣವನ್ನು ಯಶಸ್ವಿಯಾಗಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನದಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ₹4.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹20 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಭಟ್ಕಳದ ಬದ್ರಿಯಾ ಕಾಲೋನಿ ನಿವಾಸಿ ಫೌಜಾನ್ ಅಹ್ಮದ್ (21) ಬಂಧಿತ ಆರೋಪಿ.


ಪ್ರಕರಣದ ಹಿನ್ನೆಲೆ:
ಕಳೆದ ಮೇ 8ರಂದು ನಗರದ ಕಿದ್ವಾಯಿ ರಸ್ತೆಯ 1ನೇ ಕ್ರಾಸ್ ನಿವಾಸಿ ನಾಹಿದ್ ಅಕ್ತರ್ ಅವರ ಮನೆಯ ಹಿಂಭಾಗದ ಕಿಟಕಿಯ ಗಾಜು ಒಡೆದು ಒಳನುಗ್ಗಿದ್ದ ದುಷ್ಕರ್ಮಿಗಳು, ಮನೆಯಲ್ಲಿದ್ದ 55 ಗ್ರಾಂ ತೂಕದ ಸುಮಾರು ₹5.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹10 ಸಾವಿರ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.


ಬೆಂಗಳೂರಿನಲ್ಲಿ ಗಿರವಿ ಇಟ್ಟಿದ್ದ ಆಭರಣ:
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ತಾಂತ್ರಿಕ ಹಾಗೂ ಖಚಿತ ಮಾಹಿತಿ ಮೇರೆಗೆ ಆರೋಪಿ ಫೌಜಾನ್ ಅಹ್ಮದ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿರುವ ಮಣಪ್ಪುರಂ ಫೈನಾನ್ಸ್ ಶಾಖೆಯಲ್ಲಿ ಗಿರವಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.


ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಬೆಂಗಳೂರಿಗೆ ತೆರಳಿ ಅಲ್ಲಿ ಗಿರವಿ ಇಡಲಾಗಿದ್ದ 29.01 ಗ್ರಾಂ ತೂಕದ ₹4.50 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಮತ್ತು ₹20 ಸಾವಿರ ನಗದನ್ನು ಜಪ್ತಿ ಮಾಡಿದ್ದಾರೆ.


ಪೊಲೀಸ್ ತಂಡಕ್ಕೆ ಶ್ಲಾಘನೆ:
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ. ಕೃಷ್ಣಮೂರ್ತಿ ಮತ್ತು ಜಗದೀಶ್ ಎಂ. ಹಾಗೂ ಭಟ್ಕಳ ಡಿವೈಎಸ್ಪಿ ಗಿರೀಶ್ ಬಿ. ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.


ಭಟ್ಕಳ ನಗರ ಸಿಪಿಐ ದಿವಾಕರ ಪಿ.ಎಂ. ನೇತೃತ್ವದಲ್ಲಿ, ಪಿಎಸ್‌ಐ ನವೀನ್ ಎಸ್. ನಾಯ್ಕ ಹಾಗೂ ಸಿಬ್ಬಂದಿಗಳಾದ ದಿನೇಶ್ ನಾಯ್ಕ, ಸತೀಶ್ ಭಟ್ಟ, ರವಿ ಪಟಗಾರ, ಮಹಾಂತೇಶ ಹಿರೇಮಠ ಮತ್ತು ಕಾಶಿನಾಥ ಕೊಟಗುಣಶಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿಯಾಗಿ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

About The Author

error: Content is protected !!