ಭಟ್ಕಳ: ಇಲ್ಲಿನ ಪ್ರತಿಷ್ಠಿತ ನ್ಯೂ ಇಂಗ್ಲೀಷ್ ಸ್ಕೂಲ್‌ನ ವಿಶ್ರಾಂತ ಆಂಗ್ಲ ಭಾಷಾ ಶಿಕ್ಷಕಿ ರಾಜಂ ಹಿಚ್ಕಡ ಅವರಿಗೆ ಶಿಕ್ಷಣ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಕೊಡುಗೆಗಾಗಿ ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಪರಿಷತ್ತು ‘ಭಾರತ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಶೈಕ್ಷಣಿಕ ಹಾಗೂ ಸಾಮಾಜಿಕ ರಂಗದಲ್ಲಿ ಅನನ್ಯ ಸೇವೆ
ರಾಜಂ ಹಿಚ್ಕಡ ಅವರು ಹಲವು ದಶಕಗಳ ಕಾಲ ನ್ಯೂ ಇಂಗ್ಲೀಷ್ ಸ್ಕೂಲ್‌ನಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ, ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ. ನಿವೃತ್ತಿಯ ನಂತರವೂ ಸಮಾಜಮುಖಿ ಚಿಂತನೆಗಳನ್ನು ಮುಂದುವರಿಸಿರುವ ಅವರು, ತಮ್ಮ ಪೋಷಕರ ಸವಿನೆನಪಿನಲ್ಲಿ ‘ಭಾವ ಚಂದ್ರಮ’ ವೇದಿಕೆಯನ್ನು ಸ್ಥಾಪಿಸಿ, ಅದರ ಮೂಲಕ ನಿರಂತರವಾಗಿ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜದ ಗಮನ ಸೆಳೆದಿದ್ದಾರೆ.
ಪ್ರೇರಣೆ ನೀಡಿದ ಪ್ರಶಸ್ತಿ: ರಾಜಂ ಹಿಚ್ಕಡ
ಈ ಹಿಂದೆ ತಮ್ಮ ವಿಶಿಷ್ಟ ಸೇವೆಗಾಗಿ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿರುವ ರಾಜಂ ಹಿಚ್ಕಡ ಅವರಿಗೆ ಈಗ ಜಾಗತಿಕ ಮಟ್ಟದ ಪ್ರಶಸ್ತಿ ಒಲಿದು ಬಂದಿರುವುದು ಸಾರ್ವಜನಿಕ ವಲಯದಲ್ಲಿ ಸಂತಸ ಮೂಡಿಸಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಈ ಪುರಸ್ಕಾರವು ನನ್ನ ವೈಯಕ್ತಿಕ ಸಾಧನೆಗೆ ಸಂದ ಗೌರವ ಮಾತ್ರವಲ್ಲ, ಸಮಾಜ ಸೇವೆಯನ್ನು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ಹಾಗೂ ನಿರಂತರವಾಗಿ ಮುಂದುವರಿಸಲು ನನಗೆ ಸಿಕ್ಕ ದೊಡ್ಡ ಪ್ರೇರಣೆಯಾಗಿದೆ,” ಎಂದು ಕೃತಜ್ಞತೆ ಸಲ್ಲಿಸಿದರು.

ರಾಜಂ ಹಿಚ್ಕಡ ಅವರಿಗೆ ಈ ಅತ್ಯುನ್ನತ ಗೌರವ ಲಭಿಸಿರುವುದಕ್ಕೆ ಭಟ್ಕಳದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿ ಬಳಗ ಹಾಗೂ ಗಣ್ಯರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ