July 15, 2026

ಚಿಕ್ಕೋಡಿಯಲ್ಲಿ KRS ಪಕ್ಷದಿಂದ ಅಧಿಕಾರಿಗಳಿಗೆ ಸರಣಿ ಮನವಿ ಸಲ್ಲಿಕೆ: ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪರ ಹೋರಾಟ

ಚಿಕ್ಕೋಡಿ: ರೈತರು, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರನ್ನು ಕಾಡುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ವತಿಯಿಂದ ಇಂದು ಚಿಕ್ಕೋಡಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸರಣಿ ಮನವಿಗಳನ್ನು ಸಲ್ಲಿಸಲಾಯಿತು. ಉಪವಿಭಾಗಾಧಿಕಾರಿಗಳು (AC), ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಹಾಗೂ ಕೃಷಿ ಇಲಾಖೆ ಉಪನಿರ್ದೇಶಕರಿಗೆ (AD) ಪ್ರತ್ಯೇಕವಾಗಿ ನಿಯೋಗ ತೆರಳಿ ದೂರು ಸಲ್ಲಿಸುವ ಮೂಲಕ ತುರ್ತು ಕ್ರಮಕ್ಕೆ ಆಗ್ರಹಿಸಲಾಯಿತು.
KRS ಪಕ್ಷದ ಜಿಲ್ಲಾ ಅಧ್ಯಕ್ಷರಾದ ಸಿದ್ದು ಬನಸೋಡೆ ಅವರ ನೇತೃತ್ವದಲ್ಲಿ ನಡೆದ ಈ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುತ್ತಿರುವ ಮೂರು ಪ್ರಮುಖ ವಿಷಯಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು.

೧. ಖಾಸಗಿ ಶಾಲೆಗಳ ಶುಲ್ಕ ದಂದೆಗೆ ಲಗಾಮು ಹಾಕಲು BEOಗೆ ಮನವಿ

ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಚಿಕ್ಕೋಡಿ ತಾಲೂಕಿನ ಕೆಲವು ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಪ್ರವೇಶ ಶುಲ್ಕ (Admission Fee) ಹಾಗೂ ವಿವಿಧ ನೆಪಗಳಲ್ಲಿ ಪೋಷಕರಿಂದ ವಸೂಲಿ ಮಾಡುತ್ತಿವೆ ಎಂದು ದೂರು ನೀಡಲಾಯಿತು. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ನಿಯಮ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಯಿತು.

೨. ಕೃಷಿ ಭೂಮಿಗೆ ಕಾರ್ಖಾನೆ ತ್ಯಾಜ್ಯ ನೀರು: ACಗೆ ದೂರು

ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಚಿಕ್ಕೋಡಿ ಭಾಗದ ಸಕ್ಕರೆ ಕಾರ್ಖಾನೆಗಳು ಟ್ಯಾಂಕರ್‌ಗಳ ಮೂಲಕ ರಾಸಾಯನಿಕ ಮಿಶ್ರಿತ ವಿಷಕಾರಿ ತ್ಯಾಜ್ಯ ನೀರನ್ನು ರೈತರ ಕೃಷಿ ಜಮೀನುಗಳಿಗೆ ಹರಿಸುತ್ತಿರುವ ಗಂಭೀರ ಆರೋಪವನ್ನು ಮಾಡಲಾಯಿತು. ಇದರಿಂದ ಫಲವತ್ತಾದ ಕೃಷಿ ಭೂಮಿ, ಬೆಳೆಗಳು ಹಾಗೂ ಅಂತರ್ಜಲ ಸಂಪೂರ್ಣ ಕಲುಷಿತಗೊಂಡು ನಾಶವಾಗುವ ಭೀತಿ ಎದುರಾಗಿದೆ. ಪರಿಸರ ಮತ್ತು ರೈತರ ಜೀವ-ಜೀವನದ ಹಿತದೃಷ್ಟಿಯಿಂದ ಈ ಬಗ್ಗೆ ತುರ್ತು ತನಿಖೆ ನಡೆಸಿ, ತಪ್ಪಿತಸ್ಥ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಲಾಯಿತು.

೩. ರಸಗೊಬ್ಬರ ಕೃತಕ ಅಭಾವ, ಲಿಂಕ್ ಸೇಲ್ ದಂಧೆ ತಡೆಗೆ ಕೃಷಿ ಇಲಾಖೆಗೆ ಆಗ್ರಹ

ಕೃಷಿ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ, ತಾಲೂಕಿನ ಕೆಲವು ರಸಗೊಬ್ಬರ ಮಾರಾಟಗಾರರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ರೈತರಿಂದ ಲೂಟಿ ಮಾಡುತ್ತಿದ್ದಾರೆ. ಅಲ್ಲದೆ, ಅಗತ್ಯ ಗೊಬ್ಬರದ ಜೊತೆಗೆ ಬೇಡದ ಇತರ ಉತ್ಪನ್ನಗಳನ್ನು ಬಲವಂತವಾಗಿ ಖರೀದಿಸುವಂತೆ “ಲಿಂಕ್ ಸೇಲ್” ದಂಧೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ರೈತರಿಗೆ ಅಗತ್ಯವಿರುವ ರಸಗೊಬ್ಬರಗಳನ್ನು ನ್ಯಾಯಯುತ ಬೆಲೆಯಲ್ಲಿ, ಯಾವುದೇ ಗೊಂದಲವಿಲ್ಲದೆ ಒದಗಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

“ರೈತರ ಜಮೀನುಗಳಿಗೆ ವಿಷಕಾರಿ ತ್ಯಾಜ್ಯ ನೀರು ಹರಿಸುವುದು, ಶಾಲೆಗಳಲ್ಲಿ ಅನಧಿಕೃತವಾಗಿ ಹಗಲು ದರೋಡೆ ಮಾಡುವುದು ಹಾಗೂ ರಸಗೊಬ್ಬರ ಮಾರಾಟದಲ್ಲಿ ರೈತರನ್ನು ಸುಲಿಯುವುದು ಜನಸಾಮಾನ್ಯರ ಹಿತಕ್ಕೆ ವಿರುದ್ಧವಾಗಿದೆ. ಅಧಿಕಾರಿಗಳು ಕೇವಲ ಭರವಸೆ ನೀಡದೆ, ತಕ್ಷಣವೇ ಮೈದಾನಕ್ಕಿಳಿದು ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗದಿದ್ದರೆ KRS ಪಕ್ಷದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.”
ಸಿದ್ದು ಬನಸೋಡೆ, ಜಿಲ್ಲಾ ಅಧ್ಯಕ್ಷರು, KRS ಪಕ್ಷ.

ಮನವಿ ಸ್ವೀಕರಿಸಿದ ಅಧಿಕಾರಿಗಳು, ವಿಷಯದ ಗಂಭೀರತೆಯನ್ನು ಪರಿಗಣಿಸಿ ತಕ್ಷಣವೇ ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಜಿಲ್ಲಾ ಹಾಗೂ ತಾಲೂಕು ಸಮಿತಿಯ ಪ್ರಮುಖ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸ್ಥಳೀಯ ರೈತರು ಉಪಸ್ಥಿತರಿದ್ದರು.                                     ವರದಿ : ಮಹೇಶ ಶರ್ಮ

About The Author

error: Content is protected !!