ಭಟ್ಕಳ: “ಸಮಾಜದಲ್ಲಿ ಯೋಧರಂತೆ ಸಾಮಾಜಿಕ ನ್ಯಾಯಕ್ಕಾಗಿ ಸದಾ ಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಇಂದು ಅಗತ್ಯವಾದ ರಕ್ಷಣೆ ದೊರೆಯುತ್ತಿಲ್ಲ. ವ್ಯವಸ್ಥೆಯಲ್ಲಿನ ಕೊರತೆಗಳಿಂದಾಗಿ ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತಿದ್ದು, ಪತ್ರಕರ್ತರಿಗೆ ರಕ್ಷಣೆ ನೀಡುವುದು ಸರಕಾರದ ಆದ್ಯ ಜವಾಬ್ದಾರಿಯಾಗಿದೆ” ಎಂದು ಹಿರಿಯ ಸಾಹಿತಿ ಸೈಯದ್ ಜಮಿರುಲ್ಲಾ ಶರೀಫ್ ಹೇಳಿದರು. ಅವರು ಬುಧವಾರ ಇಲ್ಲಿನ ದಿ. ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಪತ್ರಿಕೆಗಳು ಜ್ಞಾನದ ಕೊಂಡಿ:
“ಪತ್ರಿಕೆಗಳು ಸಮಾಜದ ಆಗುಹೋಗುಗಳು ಹಾಗೂ ನ್ಯಾಯ-ಅನ್ಯಾಯಗಳನ್ನು ಜನರಿಗೆ ತಲುಪಿಸುವ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ಮತ್ತು ಮಕ್ಕಳು ಪತ್ರಿಕೆ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವೃದ್ಧಿಯಾಗುವುದಲ್ಲದೆ, ಇಂದಿನ ಸುದ್ದಿಗಳು ಭವಿಷ್ಯದ ಅರಿವಿನ ಕೊಂಡಿಯಾಗುತ್ತವೆ” ಎಂದು ಅವರು ಕರೆ ನೀಡಿದರು. ಮುಂದುವರಿದು ಮಾತನಾಡಿದ ಅವರು, “ಸತ್ಯಶೋಧನೆಯಲ್ಲಿ ತೊಡಗಿರುವ ಪತ್ರಕರ್ತರು ತಮ್ಮ ಕುಟುಂಬದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಪತ್ರಕರ್ತರು, ಶಾಂತಿ-ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ತಮ್ಮ ವೃತ್ತಿಯ ಗೌರವವನ್ನೂ ಉಳಿಸಿಕೊಂಡಿರುವುದು ಶ್ಲಾಘನೀಯ” ಎಂದರು. ಇದೇ ವೇಳೆ, ಮಳೆ-ಗಾಳಿಯನ್ನಿಟ್ಟುಕೊಳ್ಳದೆ ಮನೆಮನೆಗೆ ಪತ್ರಿಕೆ ತಲುಪಿಸುವ ವಿತರಕರು ಪತ್ರಿಕಾ ಕ್ಷೇತ್ರದ ಆರ್ಥಿಕ ಬೆನ್ನೆಲುಬಾಗಿದ್ದಾರೆ ಎಂದು ಅವರು ಬಣ್ಣಿಸಿದರು.

ಮುದ್ರಣ ಮಾಧ್ಯಮದ ಪ್ರಾಮುಖ್ಯತೆ ಅನನ್ಯ:
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, “ಪತ್ರಿಕಾ ಕ್ಷೇತ್ರವು ಸುಮಾರು 183 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಂದಿನ ಡಿಜಿಟಲ್ ಮಾಧ್ಯಮಗಳ ಅಬ್ಬರದ ನಡುವೆಯೂ ಮುದ್ರಣ ಮಾಧ್ಯಮವು ತನ್ನದೇ ಆದ ಪ್ರಾಮುಖ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ” ಎಂದರು. ದಿ. ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ ಮಾತನಾಡಿ, “ಪುಸ್ತಕಗಳು ಒಬ್ಬ ವ್ಯಕ್ತಿಯಲ್ಲಿ ಜಾಗೃತ ವ್ಯಕ್ತಿತ್ವವನ್ನು ನಿರ್ಮಿಸಿದರೆ, ಪತ್ರಿಕೆಗಳು ಇಡೀ ಜಾಗೃತ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ” ಎಂದು ಅಭಿಪ್ರಾಯಪಟ್ಟರು.


ಅಲ್ಪ ಆದಾಯದಲ್ಲೂ ನಿರಂತರ ಸೇವೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘದ ಅಧ್ಯಕ್ಷ ಮೋಹನ ನಾಯ್ಕ ಮಾತನಾಡಿ, “ಭಟ್ಕಳದ ಪತ್ರಕರ್ತರು ವೃತ್ತಿ ಗೌರವಕ್ಕೆ ಕಟ್ಟುಬಿದ್ದವರಾಗಿದ್ದಾರೆ. ಅಲ್ಪ ಆದಾಯವಿದ್ದರೂ ದಿನವಿಡೀ ಶ್ರಮಪಟ್ಟು ಸಮಾಜದ ಏಳಿಗೆಗಾಗಿ ಸೇವೆ ಸಲ್ಲಿಸುತ್ತಿದ್ದಾರೆ” ಎಂದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.

ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ತಾಲೂಕಿನ ಹಿರಿಯ ಯೋಗ ಗುರು ಗೋವಿಂದ ಗುರೂಜಿ ಹಾಗೂ ಪತ್ರಿಕೆ ವಿತರಕ ಮಂಜುನಾಥ ದೇವಾಡಿಗ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿತರಕ ಮಂಜುನಾಥ ದೇವಾಡಿಗ, “ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದ್ದರೂ, ಓದುಗರಿಗೆ ತೊಂದರೆಯಾಗಬಾರದು ಎನ್ನುವ ಒಂದೇ ಧೇಯದಿಂದ ಕಡಿಮೆ ಪತ್ರಿಕೆಗಳಿರುವ ದೂರದ ಸ್ಥಳಗಳಿಗೂ ನಿರಂತರವಾಗಿ ವಿತರಣೆ ಮಾಡುತ್ತಿದ್ದೇವೆ” ಎಂದು ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದ ಆರಂಭದಲ್ಲಿ ಪತ್ರಕರ್ತ ಮನಮೋಹನ ನಾಯ್ಕ ಸ್ವಾಗತಿಸಿದರು. ರಾಧಾಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ಕಿಣಿ ವಂದನಾರ್ಪಣೆ ನೆರವೇರಿಸಿದರೆ, ಈಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ