ಭಟ್ಕಳ: ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನೂತನ ವೈದ್ಯರ ಸ್ವಾಗತ ಹಾಗೂ ವರ್ಗಾವಣೆಗೊಂಡ ವೈದ್ಯರು ಮತ್ತು ಸಿಬ್ಬಂದಿಗಳ ಬೀಳ್ಕೊಡುಗೆ ಕಾರ್ಯಕ್ರಮ ಅತ್ಯಂತ ಭಾವುಕ ವಾತಾವರಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಆಸ್ಪತ್ರೆಯ ಮಾಜಿ ಆಡಳಿತಾಧಿಕಾರಿ ಡಾ. ಸವಿತಾ ಕಾಮತ್ ಅವರು, “ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಎಂಬುದು ಒಂದು ಸಹಜ ಪ್ರಕ್ರಿಯೆ. ತಾವು ಕಾರ್ಯನಿರ್ವಹಿಸಿದ ಆಸ್ಪತ್ರೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎನ್ನುವುದೇ ತಮ್ಮ ಆಶಯವಾಗಿದೆ” ಎಂದರು.

“ಆಸ್ಪತ್ರೆಯ ಒಟ್ಟಾರೆ ಬೆಳವಣಿಗೆಗೆ ವೈದ್ಯರು, ಸಿಬ್ಬಂದಿ ವರ್ಗ, ದಾನಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಉದಾರ ಮನಸ್ಸಿನ ದಾನಿಗಳ ನೆರವಿನಿಂದ ಆಸ್ಪತ್ರೆಯಲ್ಲಿ ಹಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿದ್ದು, ಅವರ ವಿಶ್ವಾಸ ಮತ್ತು ನಿರಂತರ ಬೆಂಬಲವನ್ನು ಸದಾ ಸ್ಮರಿಸುತ್ತೇನೆ” ಎಂದು ಭಾವನಾತ್ಮಕವಾಗಿ ನುಡಿದರು. ಮುಂದುವರಿದು ಮಾತನಾಡಿದ ಅವರು, “ಭಟ್ಕಳ ಆಸ್ಪತ್ರೆಗೆ ನೂತನವಾಗಿ ಹಿರಿಯ ತಜ್ಞ ವೈದ್ಯರಾದ ಡಾ. ರಾಬರ್ಟ್ ರೆಬೆಲ್ಲೊ ಸೇರಿದಂತೆ ಹಲವು ದಕ್ಷ ವೈದ್ಯರು ಸೇರ್ಪಡೆಯಾಗಿರುವುದು ಆಸ್ಪತ್ರೆಯ ಸೇವಾ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬ ವಿಶ್ವಾಸವಿದೆ. ವ್ಯಕ್ತಿಗಳಿಗಿಂತ ಸಂಸ್ಥೆಯೇ ಯಾವತ್ತೂ ಶ್ರೇಷ್ಠವಾಗಿದ್ದು, ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಆಸ್ಪತ್ರೆ ಮತ್ತಷ್ಟು ಪ್ರಗತಿ ಸಾಧಿಸಲಿ” ಎಂದು ಹಾರೈಸಿದರು.

ಸಾಧಕರಿಗೆ ಗೌರವ – ಸನ್ಮಾನ:
ಇದೇ ಸಂದರ್ಭದಲ್ಲಿ ಆಸ್ಪತ್ರೆಯಿಂದ ವರ್ಗಾವಣೆಗೊಂಡ ತಜ್ಞ ವೈದ್ಯರಾದ ಡಾ. ಲಕ್ಷೀಶ, ಡಾ. ಸತೀಶ ಬಿ. ಹಾಗೂ ಶುಶ್ರೂಷಕಿಯರಾದ ಅಮೃತಾ ಎಂ., ಅರ್ಚನಾ ಭಂಡಾರ್ಕರ್ ಮತ್ತು ಅನಸೂಯಾ ಅವರನ್ನು ಆಸ್ಪತ್ರೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ನೂತನ ವೈದ್ಯರಿಗೆ ಆತ್ಮೀಯ ಸ್ವಾಗತ:
ಭಟ್ಕಳ ತಾಲೂಕು ಆಸ್ಪತ್ರೆಗೆ ನೂತನವಾಗಿ ನಿಯೋಜನೆಗೊಂಡಿರುವ ಹಿರಿಯ ತಜ್ಞ ವೈದ್ಯ ಡಾ. ರಾಬರ್ಟ್ ರೆಬೆಲ್ಲೊ, ಡಾ. ಪ್ರಕಾಶ ನಾಯ್ಕ, ಡಾ. ಅನುರಾಧ ನಾಯಕ ಹಾಗೂ ಡಾ. ಸುಮಲತಾ ಅವರನ್ನು ಆಸ್ಪತ್ರೆಯ ಕುಟುಂಬಕ್ಕೆ ಆತ್ಮೀಯವಾಗಿ ಹೂಗುಚ್ಛ ನೀಡಿ ಸ್ವಾಗತಿಸಿ, ಅಭಿನಂದಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಆರೋಗ್ಯಾಧಿಕಾರಿ (ಖಿಊಔ) ಡಾ. ಸನಾ ಪಟೇಲ್ ವಹಿಸಿದ್ದರು. ಡಾ. ಅರುಣ ಕುಮಾರ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವಿವಿಧ ದಾನಿಗಳು, ವೈದ್ಯರು, ಆಸ್ಪತ್ರೆಯ ನರ್ಸಿಂಗ್ ಹಾಗೂ ಪ್ರಶಾಸಕೀಯ ಸಿಬ್ಬಂದಿಗಳು ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ