July 15, 2026

ಭಟ್ಕಳ ತಾಲ್ಲೂಕಿನಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ: ನಾಟಿಗದ್ದೆ, ಮಾನವ ಸರಪಳಿ ಮೂಲಕ ವಿನೂತನ ಜಾಗೃತಿ ಅಭಿಯಾನ6 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮತದಾರರನ್ನು ಆಕರ್ಷಿಸಿದ ಸ್ವೀಪ್ (SIR) ಕಾರ್ಯಕ್ರಮಗಳು

ಭಟ್ಕಳ: ಭಟ್ಕಳ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸಮಗ್ರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯಂತ ಚುರುಕಿನಿಂದ ಸಾಗುತ್ತಿದ್ದು, ಮತದಾರರನ್ನು ಆಕರ್ಷಿಸಲು ಮತ್ತು ಜಾಗೃತಿ ಮೂಡಿಸಲು ವಿಭಿನ್ನ ಹಾಗೂ ವಿನೂತನ ಶೈಲಿಯ ಸ್ವೀಪ್ (SIR) ಕಾರ್ಯಕ್ರಮಗಳು ಜರುಗುತ್ತಿವೆ.

  1. ಹಾಡವಳ್ಳಿಯಲ್ಲಿ ಮೆರವಣಿಗೆ, ಮಾನವ ಸರಪಳಿ:
    ಹಾಡವಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಕುಂಟವಾಣಿ ಸರ್ಕಲ್‌ನಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಲಾಯಿತು. ನಂತರ ಅಲ್ಲಿನ ಪ್ರೌಢಶಾಲೆಯಿಂದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೆರವಣಿಗೆ ನಡೆಸುವ ಮೂಲಕ ಸಾರ್ವಜನಿಕರಿಗೆ SIR ಕಾರ್ಯಕ್ರಮದ ಮಹತ್ವದ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಯಾದವ ನಾಯ್ಕ, ಕಾರ್ಯದರ್ಶಿ ಮಂಜುನಾಥ ಶೆಟ್ಟಿಮನೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಹಾಜರಿದ್ದರು.
  2. ಮುಂಡಳ್ಳಿಯಲ್ಲಿ ನಾಟಿಗದ್ದೆಯಲ್ಲೇ ಜಾಗೃತಿ:
    ಮುಂಡಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರನ್ನು ತಲುಪಲು ವಿನೂತನ ಪ್ರಯತ್ನ ಮಾಡಲಾಯಿತು. ಕೃಷಿಕರು ಕೆಲಸ ಮಾಡುತ್ತಿದ್ದ ನಾಟಿಗದ್ದೆಯಲ್ಲೇ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ SIR ಕಾರ್ಯಕ್ರಮದ ಮಾಹಿತಿ ನೀಡಲಾಯಿತಲ್ಲದೆ, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಯಾವುದೇ ತಪ್ಪಿಲ್ಲದೇ ಫಾರಂ ಭರ್ತಿ ಮಾಡುವ ಕುರಿತು ಅರಿವು ಮೂಡಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕೇಶ್ವರ ಗೊಂಡ ಹಾಗೂ ಪಂಚಾಯತ್ ಸಿಬ್ಬಂದಿಗಳು ಈ ವಿಶಿಷ್ಟ ಅಭಿಯಾನ ನಡೆಸಿದರು.
  3. ಶಿರಾಲಿ ಬೀದಿಗಳಲ್ಲಿ ಪ್ರಚಾರ:
    ಶಿರಾಲಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಭಿತ್ತಿಪತ್ರ ಹಾಗೂ ಪ್ರದರ್ಶನಗಳ ಮೂಲಕ SIR ಕಾರ್ಯಕ್ರಮದ ಜನಜಾಗೃತಿ ಮೂಡಿಸಲಾಯಿತು. ದ್ವಿತೀಯ ದರ್ಜೆ ಸಹಾಯಕಿ (SIR) ಪ್ರತಿಮಾ ದೇವಾಡಿಗ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
  4. ಹೆಬಳೆಯಲ್ಲಿ ಪಾಲಕರಿಗೆ ಅರಿವು:
    ಹೆಬಳೆ ಗ್ರಾಮ ಪಂಚಾಯತ್ ವತಿಯಿಂದ ಸರ್ಕಾರಿ ಕನ್ನಡ ಹಾಗೂ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳ ಮೂಲಕ ಅವರ ಪಾಲಕರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗೊಂಡ, ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
  5. ಬೈಲೂರು ಶಾಲಾ ಆವರಣದಲ್ಲಿ ಮಾನವ ಸರಪಳಿ:
    ಬೈಲೂರು ಗ್ರಾಮ ಪಂಚಾಯತ್ ವತಿಯಿಂದ ಅಲ್ಲಿನ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಸಹಯೋಗದೊಂದಿಗೆ ಮಾನವ ಸರಪಳಿ ನಿರ್ಮಿಸಿ SIR ಕಾರ್ಯಕ್ರಮದ ಕುರಿತು ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯದರ್ಶಿ ಈರಪ್ಪ ಬೇವಿನಗಿಡ, ದ್ವಿತೀಯ ದರ್ಜೆ ಸಹಾಯಕ ತಿರುಮಲೇಶ ನಾಯ್ಕ ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
  6. ಕಾಯ್ಕಿಣಿಯಲ್ಲಿ ವಾಹನ ಪ್ರಚಾರ:
    ಕಾಯ್ಕಿಣಿ ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕರು ಹೆಚ್ಚು ಸೇರುವ ಅಂಗಡಿ ಮುಂಗಟ್ಟುಗಳ ಪ್ರದೇಶಗಳಲ್ಲಿ ಧ್ವನಿವರ್ಧಕ ಅಳವಡಿಸಿದ ವಿಶೇಷ ವಾಹನದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗರಾಜ ವಿ., ದ್ವಿತೀಯ ದರ್ಜೆ ಸಹಾಯಕಿ ನಾಗವೇಣಿ ನಾಯ್ಕ ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಸಾರ್ವಜನಿಕರಿಗೆ ಮಾಹಿತಿ ಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು.

ತಾಲ್ಲೂಕು ಪಂಚಾಯತ್ ಸ್ವೀಪ್ ಸಮಿತಿಯ ಮಾರ್ಗದರ್ಶನದಲ್ಲಿ ನಡೆದಿರುವ ಈ ಎಲ್ಲಾ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿವೆ.

About The Author

error: Content is protected !!