July 15, 2026

ಎಸ್. ಜಾನಕಿ ಭೇಟಿ ಈಗ ಮಧುರ ನೆನಪು: ಪ್ರಭಾ ಸ್ಟೂಡಿಯೋ ಕುಟುಂಬದ ಭಾವಪೂರ್ಣ ನುಡಿ

ಸಿದ್ದಾಪುರ (ಕುಂದಾಪುರ):
ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ, ‘ಗಾನಕೋಗಿಲೆ’ ಎಸ್. ಜಾನಕಿ ಅವರ ನಿಧನ ಸಂಗೀತಾಭಿಮಾನಿಗಳಿಗೆ ಅಪಾರ ನೋವುಂಟು ಮಾಡಿದೆ. ಅವರ ಅಗಲಿಕೆಯ ಬೆನ್ನಲ್ಲೇ, ಇತ್ತೀಚೆಗೆ ಕುಂದಾಪುರ ತಾಲೂಕಿನ ಸಿದ್ದಾಪುರದ ಪ್ರಭಾ ಸ್ಟೂಡಿಯೋಗೆ ಅವರು ನೀಡಿದ್ದ ಭೇಟಿ ಇದೀಗ ಅಲ್ಲಿನ ಕುಟುಂಬಕ್ಕೆ ಮರೆಯಲಾಗದ ಮಧುರ ನೆನಪಾಗಿ ಉಳಿದಿದೆ.

ಆತ್ಮೀಯ ಸ್ವಾಗತ ಹಾಗೂ ಆಶೀರ್ವಾದ

ಕಮಲಶೀಲೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಭಾ ಸ್ಟೂಡಿಯೋ ಮಾಲೀಕರಾದ ಪ್ರಶಾಂತ ಭಟ್ ಅವರ ಆಹ್ವಾನದ ಮೇರೆಗೆ ಎಸ್. ಜಾನಕಿ ಅವರು ಸ್ಟೂಡಿಯೋಗೆ ಆಗಮಿಸಿ ಕೆಲಕಾಲ ವಿಶ್ರಾಂತಿ ಪಡೆದಿದ್ದರು. ಈ ವೇಳೆ ಪ್ರಶಾಂತ ಭಟ್ ಹಾಗೂ ಕುಟುಂಬದವರು ಗಾಯನ ಸರಸ್ವತಿಯನ್ನು ಆತ್ಮೀಯವಾಗಿ ಸ್ವಾಗತಿಸಿ, ಗೌರವ ಸಲ್ಲಿಸಿದ್ದರು.
ಸ್ಟೂಡಿಯೋದಲ್ಲಿ ಲಘು ಉಪಹಾರ ಸೇವಿಸಿದ ಎಸ್. ಜಾನಕಿ ಅವರು ಕುಟುಂಬ ಸದಸ್ಯರೊಂದಿಗೆ ಅತ್ಯಂತ ಆತ್ಮೀಯವಾಗಿ ಮಾತುಕತೆ ನಡೆಸಿ ಶುಭ ಹಾರೈಸಿದ್ದರು. ಅವರ ಅಪಾರ ಸರಳತೆ, ವಿನಯಶೀಲತೆ ಹಾಗೂ ಎಲ್ಲರೊಂದಿಗೆ ಮಗುವಿನಂತೆ ಬೆರೆತು ಮಾತನಾಡಿದ ಆ ಅಪರೂಪದ ನಡೆ ಕುಟುಂಬದವರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ.

“ಗಾನಕೋಗಿಲೆ ನಮ್ಮ ಮನೆಗೆ ಆಗಮಿಸಿ ಆಶೀರ್ವದಿಸಿದ ಕ್ಷಣಗಳು ನಮ್ಮ ಜೀವನದ ಸುವರ್ಣ ನೆನಪು. ಅವರ ಸರಳ ವ್ಯಕ್ತಿತ್ವ ಮತ್ತು ಆತ್ಮೀಯತೆ ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಹಸಿರಾಗಿ ಉಳಿಯಲಿದೆ.”
ಪ್ರಭಾ ಸ್ಟೂಡಿಯೋ ಕುಟುಂಬ

ಜಾನಕಮ್ಮನವರು ಭೇಟಿ ನೀಡಿದ ಈ ಅಪರೂಪದ ಕ್ಷಣದಲ್ಲಿ ಪ್ರಶಾಂತ ಭಟ್, ಗಾಯತ್ರಿ ಭಟ್, ಸಚಿಂದ್ರ ಭಟ್, ಚಂದ್ರಕಾಂತ ಭಟ್ ಹಾಗೂ ಭಾರತಿ ಭಟ್ ಉಪಸ್ಥಿತರಿದ್ದು, ಗಾಯಕಿಯ ಆಶೀರ್ವಾದ ಪಡೆದಿದ್ದರು.
ಪ್ರಸಿದ್ಧ ಗಾಯಕಿ ಇನ್ನು ನೆನಪು ಮಾತ್ರ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದ ಪ್ರಭಾ ಸ್ಟೂಡಿಯೋ ಕುಟುಂಬ, ಅವರೊಂದಿಗೆ ಕಳೆದ ಆ ಅಮೂಲ್ಯ ಹಾಗೂ ಐತಿಹಾಸಿಕ ಕ್ಷಣಗಳನ್ನು ಕಣ್ಣೀರಿನ ವಿದಾಯದೊಂದಿಗೆ ಸ್ಮರಿಸುತ್ತಾ ಕೃತಜ್ಞತೆ ಸಲ್ಲಿಸಿದೆ.

About The Author

error: Content is protected !!