ಭಟ್ಕಳ: ಅತ್ಯಂತ ಕಠಿನವಾದ ಗಂಡಕಿ ಯಾತ್ರೆಯನ್ನು ಕೈಗೊಂಡು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸಮಾಜದ ಮಾರ್ಗದರ್ಶಕರಾಗಿದ್ದ 23ನೇ ಯತಿವರ್ಯರು, ವೃಂದಾವನಸ್ಥ ಪರಮಪೂಜ್ಯ ಶ್ರೀ ಶ್ರೀಮದ್ ವಿದ್ಯಾಧೀರಾಜ ತೀರ್ಥ ಶ್ರೀಪಾದ್ ವಡೇರ ಸ್ವಾಮೀಜಿಯವರ 5ನೇ ವರ್ಷದ ಪುಣ್ಯತಿಥಿ ಆರಾಧನೆಯನ್ನು ಶುಕ್ರವಾರ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.

ಪರ್ತಗಾಳಿ ಶ್ರೀ ಸಂಸ್ಥಾನದಲ್ಲಿ ಗುರುನಮನ
ಗೋವಾ ರಾಜ್ಯದ ಪರ್ತಗಾಳಿಯ ಶ್ರೀ ಸಂಸ್ಥಾನದಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರು ತಮ್ಮ ಪ್ರಿಯಗುರುಗಳ ವೃಂದಾವನಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ಸಲ್ಲಿಸಿದರು.
ಬಳಿಕ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು, ಗುರುಪರಂಪರೆಯ ಮಹತ್ವ, ಧರ್ಮಾಚರಣೆ ಹಾಗೂ ಭಗವದ್ಭಕ್ತಿಯ ಮಾರ್ಗವನ್ನು ಬೋಧಿಸಿದರು. ಶ್ರೀಹರಿ ಹಾಗೂ ಗುರುಗಳ ದಿವ್ಯ ಅನುಗ್ರಹವು ಸದಾ ಸಮಸ್ತ ಭಕ್ತ ಸಮುದಾಯದ ಮೇಲಿರಲಿ ಎಂದು ಹಾರೈಸಿದರು.
ಭಟ್ಕಳ ವಡೇರ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
ಪುಣ್ಯತಿಥಿಯ ಅಂಗವಾಗಿ ಭಟ್ಕಳದ ಶ್ರೀ ವಡೇರ ಮಠದಲ್ಲೂ ವಿವಿಧ ಧಾರ್ಮಿಕ ವಿಧಿವಿಧಾನಗಳು ವಿಜೃಂಭಣೆಯಿಂದ ಜರುಗಿದವು:

ವಿಶೇಷ ಪೂಜೆ: ವೇದಮೂರ್ತಿ ಕಿಶೋರ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀಮದ್ ವಿದ್ಯಾಧೀರಾಜ ತೀರ್ಥರ ಪುಣ್ಯತಿಥಿ ಹಾಗೂ ಆಷಾಢ ಶುದ್ಧ ದಶಮಿಯ ಶುಭ ಸಂದರ್ಭದಲ್ಲಿ ಮಹಾಪೂಜೆ ನೆರವೇರಿತು.
ಅನ್ನಸಂತರ್ಪಣೆ ಸೇವೆ: ದಿವಂಗತ ಅಣ್ಣಪ್ಪ ರಮಣ ಕಾಮತ್ ಅವರ ಕುಟುಂಬಸ್ಥರ ಸೇವಾದಾರತ್ವದಲ್ಲಿ ಭಕ್ತಾದಿಗಳಿಗೆ ಮಹಾಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಎಸ್ಬಿ ಸಮಾಜದ ಬಾಂಧವರು ಹಾಗೂ ನೂರಾರು ಭಕ್ತಾದಿಗಳು ಆಗಮಿಸಿ, ವೃಂದಾವನಸ್ಥ ಶ್ರೀಗಳಿಗೆ ಪ್ರಣಾಮ ಸಲ್ಲಿಸಿ, ಮಹಾಪ್ರಸಾದ ಸ್ವೀಕರಿಸಿ ಶ್ರೀ ಹರಿ-ಗುರುಗಳ ಕೃಪೆಗೆ ಪಾತ್ರರಾದರು.

More Stories
ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ: ಪ್ರತಿಭಾವಂತರಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ
ಕರ್ತವ್ಯನಿಷ್ಠೆಗೆ ರಾಜ್ಯಮಟ್ಟದ ಗೌರವ: ಹೆಡ್ ಕಾನ್ಸ್ಟೇಬಲ್ ದೀಪಕ್ ನಾಯ್ಕಗೆ ಡಿ.ಜಿ.–ಐಜಿಪಿ ಶ್ಲಾಘನಾ ಚಿನ್ನದ ಪದಕ
ಅವ್ಯವಸ್ಥೆಯ ತಾಣವಾದ ಮುರ್ಡೇಶ್ವರ ಬಸ್ ನಿಲ್ದಾಣ: ಸುಧಾರಣೆ ಕಾಣುವುದು ಯಾವಾಗ?