ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ ಹಾಗೂ ಪುಸ್ತಕ ಪರಿಚಾರಕ ಕಮಲಾಕರ ಭಂಡಾರಿ (ಜುಲೈ ೨೭) ಬೆಳಗಿನ ಜಾವ ೩ ಗಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಡುಪಿಯಲ್ಲಿ ಮಕ್ಕಳ ಆರೈಕೆಯಲ್ಲಿದ್ದರು. ಅವರ ಇಚ್ಛೆಯಂತೆ ಮತ್ತು ಬಾಳಸಂಗಾತಿ ಇಂದಿರಾ ಹಾಗೂ ಮಕ್ಕಳಾದ ಛಾಯಾ, ಅನಿಲ್ ಅವರ ಸಮ್ಮತಿಯಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಜೀವಿತಾವಧಿಯಲ್ಲೇ ಅವರು ನೇತ್ರದಾನಕ್ಕೂ ನೋಂದಾಯಿಸಿಕೊಂಡಿದ್ದರು.
ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿ ಗ್ರಾಮ ಪಂಚಾಯತಿಯ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಅವರು ಸಾರ್ವಜನಿಕ ಸೇವೆ ಸಲ್ಲಿಸಿದ್ದರು. ಬಂಡಾಯ ಸಾಹಿತಿ ಡಾ. ಆರ್.ವಿ. ಭಂಡಾರಿಯವರ ಅಳಿಯ ಹಾಗೂ ಡಾ. ವಿಠ್ಠಲ ಭಂಡಾರಿಯವರ ಬಾವಂದಿರಾಗಿದ್ದ ಇವರು, ಸಿದ್ದಾಪುರದ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಯಕ್ಷಗಾನ ತಾಳಮದ್ದಲೆ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು.
‘ಬಂಡಾಯ ಪ್ರಕಾಶನ’ ಮತ್ತು ‘ಸಹಯಾನ ಕೆರೆಕೋಣ’ ಸಂಸ್ಥೆಗಳ ಮೂಲಕ ಪುಸ್ತಕ ಪ್ರದರ್ಶನ ಮತ್ತು ಮಾರಾಟದಲ್ಲಿ ಸಕ್ರಿಯರಾಗಿದ್ದ ಇವರು, ಬಂದ ಲಾಭಾಂಶದಿಂದ ಇತರರಿಗೆ ನೆರವಾಗುತ್ತಿದ್ದರು. ಸಿದ್ದಾಪುರದಲ್ಲಿ ಡಾ. ಆರ್.ವಿ. ಪುಸ್ತಕ ಮನೆಯನ್ನು ಮಗನೊಂದಿಗೆ ನಡೆಸುತ್ತಿದ್ದ ಅವರು, ಸಿಐಟಿಯು, ಅಂಗನವಾಡಿ, ಅಕ್ಷರದಾಸೋಹ ಹಾಗೂ ರೈತ ಸಂಘಟನೆಗಳ ಆರಂಭಿಕ ಬೆಳವಣಿಗೆಗೆ ನೆರವಾಗಿದ್ದರು.

ಅವರ ಸಮಾಜಮುಖಿ ಸೇವೆಗಾಗಿ ಸಹಕಾರಿ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮಾನಗಳು ಲಭಿಸಿದ್ದವು. ಮೃತರು ಪತ್ನಿ, ಇಬ್ಬರು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

About The Author


More Stories
ನವರಾತ್ರಿ ಸಂಭ್ರಮ: ನಾಣಿಕಟ್ಟಾದಲ್ಲಿ 97ನೇ ‘ಯಕ್ಷ ವಂದನೆ – ಯಕ್ಷಪರ್ವ’ ಕಾರ್ಯಕ್ರಮ
ಆಗಸ್ಟ್ 15ರಂದು ನಾಣಿಕಟ್ಟಾದಲ್ಲಿ ‘ಯಕ್ಷ ಶ್ರಾವಣ’ ಗಾನ ವೈಭವ: ಯಕ್ಷರಂಗದ ದೈತ್ಯ ದಿಗ್ಗಜರ ಸಮಾಗಮ
ತ್ಯಾಗಲಿಯಲ್ಲಿ ಯಶಸ್ವಿಯಾದ ಆಧಾರ್ ತಿದ್ದುಪಡಿ ಮೇಳ: 100ಕ್ಕೂ ಅಧಿಕ ಜನರಿಗೆ ಅನುಕೂಲ