August 24, 2026

ಭಟ್ಕಳದ ಐತಿಹಾಸಿಕ ಮಾರಿಜಾತ್ರೆ ಆಗಸ್ಟ್ 5–6: ಸಕಲ ಸಿದ್ಧತೆ ಪೂರ್ಣ, 25 ಸಾವಿರಕ್ಕೂ ಅಧಿಕ ಭಕ್ತರ ನಿರೀಕ್ಷೆ!

ಆಗಸ್ಟ್ 5ರಂದು ಮುಂಜಾನೆ ಗದ್ದುಗೆಯಲ್ಲಿ ಶ್ರೀ ಮಾರಿದೇವಿ ಮೂರ್ತಿ ಪ್ರತಿಷ್ಠಾಪನೆ

ಹಣ್ಣುಕಾಯಿಗೆ ಕುಂಕುಮ ಹಚ್ಚುವ ಪದ್ಧತಿ ಬಂದ್: ಪ್ಯಾಕೆಟ್‌ಗಳಲ್ಲಿ ಕುಂಕುಮ ಪ್ರಸಾದ ವಿತರಣೆಗೆ ನಿರ್ಧಾರ

ವಿಸರ್ಜನಾ ಪೂಜೆ ವೇಳೆ ಫೋಟೋ, ವೀಡಿಯೊ ಚಿತ್ರೀಕರಣ ಸಂಪೂರ್ಣ ನಿಷೇಧ


ಭಟ್ಕಳ:  ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯ ಭಟ್ಕಳದ ಪ್ರಸಿದ್ಧ ಮಾರಿಜಾತ್ರೆಯು ಆಗಸ್ಟ್ 5 ಮತ್ತು 6ರಂದು ಭಕ್ತಿಭಾವದಿಂದ ನಡೆಯಲಿದ್ದು, ಜಾತ್ರೆಯ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಪಾದ ಕಂಚುಗಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಜಾತ್ರೆಯ ಪದ್ಧತಿಯಂತೆ ಜುಲೈ 28ರಂದು ಅಮಟೆ ಮರದ ಮುಹೂರ್ತ ನೆರವೇರಿಸಿ ಮೂರ್ತಿ ಕೆತ್ತನೆಗೆ ಚಾಲನೆ ನೀಡಲಾಗಿತ್ತು. ವಂಶಪಾರಂಪರ್ಯವಾಗಿ ಸೇವೆ ಸಲ್ಲಿಸುತ್ತಿರುವ ಮಣ್ಣುಳಿ ಆಚಾರ್ಯರ ಮನೆತನದಲ್ಲಿ ಆಗಸ್ಟ್ 4ರ ಸಂಜೆ ಸುವಾಸಿನಿ ಪೂಜೆ ನಡೆಯಲಿದ್ದು, ಆಗಸ್ಟ್ 5ರ ಬೆಳಿಗ್ಗೆ ಆಚಾರ್ಯರ ಮನೆತನದಿಂದ ಮೂರ್ತಿಯನ್ನು ದೇವಸ್ಥಾನದ ಆಡಳಿತ ಮಂಡಳಿಗೆ ವಿಧಿವತ್ತಾಗಿ ಹಸ್ತಾಂತರಿಸಲಾಗುವುದು.
ಬಳಿಕ ರಘುನಾಥ ದೇವಸ್ಥಾನ, ಬಸ್ತಿ ರಸ್ತೆ ಹಾಗೂ ರಥಬೀದಿ ಮಾರ್ಗವಾಗಿ ಭವ್ಯ ಮೆರವಣಿಗೆಯಲ್ಲಿ ಮೂರ್ತಿಯನ್ನು ತಂದು, ಬೆಳಿಗ್ಗೆ 5.30ಕ್ಕೆ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಜೈನ್ ಸಮುದಾಯದ ಅರ್ಚಕರಿಂದ ಪ್ರಥಮ ಪೂಜೆ ನೆರವೇರಿದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಆಗಸ್ಟ್ 6ಕ್ಕೆ ಭವ್ಯ ವಿಸರ್ಜನಾ ಮೆರವಣಿಗೆ:

ಆಗಸ್ಟ್ 6ರಂದು ಸಂಜೆ 4.30ಕ್ಕೆ ಮಹಾ ಪ್ರಾರ್ಥನೆ ಹಾಗೂ ವಿಸರ್ಜನಾ ಪೂಜೆ ಜರುಗಲಿದೆ. ನಂತರ ಮುಸ್ಬಾ ಕ್ರಾಸ್, ಹಳೆ ಬಸ್ ನಿಲ್ದಾಣ, ಬಂದರು ರಸ್ತೆ, ಹನುಮಾನನಗರ ಹಾಗೂ ಜಾಲಿಕೋಡಿ ಮಾರ್ಗವಾಗಿ 7 ಕಿ.ಮೀ. ಭವ್ಯ ಮೆರವಣಿಗೆಯೊಂದಿಗೆ ಸಮುದ್ರ ತೀರದಲ್ಲಿ ದೇವಿಯ ವಿಸರ್ಜನೆ ನೆರವೇರಲಿದೆ. ಈ ಮೆರವಣಿಗೆಯಲ್ಲಿ 25 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

    ಈ ಬಾರಿಯ ಜಾತ್ರೆಯ ಪ್ರಮುಖ ನಿಯಮಗಳು:

    ಕುಂಕುಮ ಪ್ರಸಾದದ ಹೊಸ ವ್ಯವಸ್ಥೆ:
    ಈ ವರ್ಷದಿಂದ ಹರಕೆ ರೂಪದಲ್ಲಿ ಸಮರ್ಪಿಸುವ ಹಣ್ಣುಕಾಯಿಗೆ ಕುಂಕುಮ ಹಚ್ಚುವ ಪದ್ಧತಿಯನ್ನು ಕೈಬಿಡಲಾಗಿದ್ದು, ಭಕ್ತರಿಗೆ ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಕುಂಕುಮ ಪ್ರಸಾದ ವಿತರಿಸಲು ಹೊಸ ವ್ಯವಸ್ಥೆ ಮಾಡಲಾಗಿದೆ.

    ಚಿತ್ರೀಕರಣ ಕಟ್ಟುನಿಟ್ಟಾಗಿ ನಿಷೇಧ:
    ಸಮುದ್ರ ತೀರದಲ್ಲಿ ನಡೆಯುವ ವಿಸರ್ಜನಾ ಪೂಜೆಯ ನಂತರದ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಪವಿತ್ರ ಹಾಗೂ ಸಂಪ್ರದಾಯಬದ್ಧವಾಗಿರುವುದರಿಂದ, ಆ ಸಂದರ್ಭದಲ್ಲಿ ಯಾವುದೇ ರೀತಿಯ ಫೋಟೋ, ವೀಡಿಯೊ ಅಥವಾ ಡ್ರೋನ್ ಚಿತ್ರೀಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

    ಆಗಸ್ಟ್ 5 (ಮೊದಲ ದಿನ): ಬೆಳಿಗ್ಗೆ 6.00 ರಿಂದ ರಾತ್ರಿ 9.00 ರವರೆಗೆ.

    ಆಗಸ್ಟ್ 6 (ಎರಡನೇ ದಿನ): ಬೆಳಿಗ್ಗೆ 6.00 ರಿಂದ ಸಂಜೆ 4.30 ರವರೆಗೆ.

    ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಪ್ರೀತಮ್ ಶೆಟ್, ಕೇಶವ ನಾಯ್ಕ, ಕೃಷ್ಣಾನಂದ ಮಹಾಲೆ, ದಿನೇಶ ನಾಯ್ಕ, ಸಂದೀಪ ಶೆಟ್, ಮಾದೇವ ಮೊಗೇರ ಹಾಗೂ ಜೀವೋತ್ತಮ ಪೈ ಉಪಸ್ಥಿತರಿದ್ದರು.

      About The Author

      error: Content is protected !!