August 24, 2026

ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಪರ ಭಟ್ಕಳ ಜನತೆ ಧ್ವನಿ: ಅನಾಮಧೇಯ ದೂರಿನ ಸಮಗ್ರ ತನಿಖೆಗೆ ಆಗ್ರಹ!

ನಿಷ್ಠಾವಂತ ವೈದ್ಯರ ವಿರುದ್ಧದ ಅಪಪ್ರಚಾರಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶ

ತನಿಖೆಯಿಲ್ಲದೆ ಕ್ರಮ ಕೈಗೊಂಡರೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ


ಭಟ್ಕಳ: ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಪ್ರಸಿದ್ಧ ಶಸ್ತ್ರಚಿಕಿತ್ಸಕ (ಸರ್ಜನ್) ಡಾ. ಅರುಣ್ ಕುಮಾರ್ ಅವರ ವಿರುದ್ಧ ಅನಾಮಧೇಯ ವ್ಯಕ್ತಿಯೊಬ್ಬರು ವಾಟ್ಸಾಪ್ ಮೂಲಕ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವರಿಗೆ ದೂರು ನೀಡಿರುವುದನ್ನು ಖಂಡಿಸಿ, ಸಾರ್ವಜನಿಕರು ಹಾಗೂ ರೋಗಿಗಳ ಬಂಧುಗಳು ಡಾ. ಅರುಣ್ ಕುಮಾರ್ ಅವರ ಬೆಂಬಲಕ್ಕೆ ನಿಂತಿದ್ದಾರೆ.


ದೂರಿನಲ್ಲಿರುವ ಆರೋಪಗಳ ಸತ್ಯಾಸತ್ಯತೆ ಪರೀಕ್ಷಿಸಿ, ಕುತಂತ್ರದಿಂದ ಸುಳ್ಳು ದೂರು ನೀಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಗಂಭೀರವಾಗಿ ಒತ್ತಾಯಿಸಿದ್ದಾರೆ.

    ಜನರ ಮೆಚ್ಚುಗೆ ಗಳಿಸಿದ ಕರ್ತವ್ಯ ನಿಷ್ಠೆ:

    ಹಲವು ವರ್ಷಗಳಿಂದ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಡಾ. ಅರುಣ್ ಕುಮಾರ್ ಅವರು 2023–24ನೇ ಸಾಲಿನ ಅತ್ಯುತ್ತಮ ವೈದ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯ ನಡುವೆಯೂ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಹಗಲು-ರಾತ್ರಿ ಎನ್ನದೆ ಶಸ್ತ್ರಚಿಕಿತ್ಸೆ ನಡೆಸಿ ಜನರ ವಿಶ್ವಾಸ ಗಳಿಸಿದ್ದಾರೆ. ಇವರ ಸೇವೆಯ ಫಲವಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಯು 2026–27ನೇ ಸಾಲಿನ ‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ’ (AB-ARK) ಯೋಜನೆಯ ರಾಜ್ಯಮಟ್ಟದ ಶ್ರೇಯಾಂಕದಲ್ಲಿ 37ನೇ ಸ್ಥಾನ ಗಳಿಸಿದೆ ಎಂಬುದನ್ನು ಸಾರ್ವಜನಿಕರು ಸ್ಮರಿಸಿದ್ದಾರೆ.
    ಅನಾಮಧೇಯ ದೂರುಗಳ ಮೂಲಕ ಪ್ರಾಮಾಣಿಕ ಅಧಿಕಾರಿಗಳ ಮನೋಬಲ ಕುಗ್ಗಿಸುವ ಪ್ರವೃತ್ತಿಗೆ ತಕ್ಷಣ ಕಡಿವಾಣ ಹಾಕಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ವೈದ್ಯರ ವಿರುದ್ಧ ಯಾವುದೇ ಏಕಪಕ್ಷೀಯ ಆಡಳಿತಾತ್ಮಕ ಕ್ರಮ ಕೈಗೊಳ್ಳಬಾರದು. ಒಂದು ವೇಳೆ ತನಿಖೆ ನಡೆಸದೆ ಕ್ರಮ ಕೈಗೊಂಡರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕರು ಎಚ್ಚರಿಸಿದ್ದಾರೆ.

    ದೇವರ ಸಮಾನವಾಗಿ ಕಾಣುವ ವೈದ್ಯರ ವಿರುದ್ಧ ದೂರು ಖಂಡನೀಯ:
    “ಡಾ. ಅರುಣ್ ಕುಮಾರ್ ಅವರ ಸೇವೆಯನ್ನು ನೋಡಿ ಸುತ್ತಮುತ್ತಲಿನ ವಿವಿಧ ಭಾಗಗಳಿಂದಲೂ ರೋಗಿಗಳು ಭಟ್ಕಳ ಆಸ್ಪತ್ರೆಗೆ ಬರುತ್ತಿದ್ದಾರೆ. ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾದ ಅನೇಕರು ಇವರನ್ನು ದೇವರಂತೆ ಕಾಣುತ್ತಿದ್ದಾರೆ. ರೋಗಿಗಳ ಸೇವೆಯನ್ನೇ ಧ್ಯೇಯವಾಗಿಸಿಕೊಂಡ ಇಂತಹ ನಿಷ್ಠಾವಂತ ವೈದ್ಯರ ವಿರುದ್ಧ ಅನಾಮಧೇಯವಾಗಿ ದೂರು ನೀಡಿರುವುದು ಅತ್ಯಂತ ಖಂಡನೀಯ.”
    — ಶ್ರೀಕಾಂತ ನಾಯ್ಕ (ಮಾಜಿ ಸೈನಿಕ)

    ರಾತ್ರಿ 12 ಗಂಟೆಯವರೆಗೂ ಆಸ್ಪತ್ರೆಯಲ್ಲಿದ್ದು ಸೇವೆ ಸಲ್ಲಿಸುತ್ತಾರೆ:
    “ಇಂದಿನ ದಿನಗಳಲ್ಲಿ ಸಂಜೆ 5 ಗಂಟೆಯಾದರೆ ಮನೆಗೆ ತೆರಳುವ ಸರ್ಕಾರಿ ವೈದ್ಯರ ನಡುವೆ, ಡಾ. ಅರುಣ್ ಕುಮಾರ್ ಅವರು ಬೆಳಿಗ್ಗೆ 9 ರಿಂದ ರಾತ್ರಿ 12 ಗಂಟೆಯವರೆಗೆ ಆಸ್ಪತ್ರೆಯಲ್ಲೇ ಉಳಿದು ರೋಗಿಗಳ ಸೇವೆ ಮಾಡುತ್ತಾರೆ. ಒಂದು ತಿಂಗಳ ಹಿಂದೆ ನನ್ನ ಪತ್ನಿಗೂ ಇಲ್ಲೇ ಶಸ್ತ್ರಚಿಕಿತ್ಸೆಯಾಗಿತ್ತು. ಇಂತಹ ನಿಸ್ವಾರ್ಥ ವೈದ್ಯರ ವಿರುದ್ಧ ಸುಳ್ಳು ದೂರು ನೀಡಿದವರ ವಿರುದ್ಧ ಅಗತ್ಯಬಿದ್ದರೆ ನಾನೇ ಕಾನೂನು ಹೋರಾಟ ನಡೆಸುತ್ತೇನೆ.”
    — ಎನ್. ಡಿ. ಖಾರ್ವಿ (ಸ್ಥಳೀಯರು)


    ಈ ಸಂದರ್ಭದಲ್ಲಿ ಪ್ರಮುಖರಾದ ಅಣ್ಣಪ್ಪ ನಾಯ್ಕ, ವಿಶ್ವನಾಥ ಮಾಹಲೆ, ಪರಮೇಶ್ವರ ನಾಯ್ಕ, ಮಂಜುನಾಥ ನಾಯ್ಕ, ಗಣೇಶ ಹಳ್ಳೆರ್, ಬಾಬು ನಾಯ್ಕ, ನಾಗೇಶ್ ನಾಯ್ಕ, ಶಂಕರ್ ನಾಯ್ಕ, ಪಾಂಡುರಂಗ ನಾಯ್ಕ, ಶ್ರೀಧರ್ ನಾಯ್ಕ, ಅಪ್ಪು ನಾಯ್ಕ ಸೇರಿದಂತೆ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.

    About The Author

    error: Content is protected !!