August 22, 2026

ಮೋಡಿಫೈಡ್ (Modified) ಸೈಲೆನ್ಸರ್ ವಿರುದ್ಧ ಭಟ್ಕಳ ಪೊಲೀಸರ ಖಡಕ್ ಕಾರ್ಯಾಚರಣೆ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ!

ಗ್ಯಾರೇಜ್, ಶೋರೂಮ್ ಹಾಗೂ ಸರ್ವೀಸ್ ಸೆಂಟರ್‌ಗಳ ಮೇಲೆ PSI ನವೀನ್ ನಾಯ್ಕ್ ನೇತೃತ್ವದಲ್ಲಿ ದಿಢೀರ್ ಪರಿಶೀಲನೆ

ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಅಳವಡಿಸಿದರೆ ಶೋರೂಮ್, ಗ್ಯಾರೇಜ್ ಮಾಲೀಕರ ಮೇಲೂ ಕಾನೂನು ಕ್ರಮ


ಭಟ್ಕಳ: ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಮೋಡಿಫೈಡ್ (Modified / Defective) ಸೈಲೆನ್ಸರ್ ಅಳವಡಿಕೆ ಹಾಗೂ ಅನಧಿಕೃತ ಮಾರ್ಪಾಡುಗಳನ್ನು ತಡೆಗಟ್ಟುವ ಉದ್ದೇಶದಿಂದ ಭಟ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ನಗರದ ಎಲ್ಲಾ ದ್ವಿಚಕ್ರ ವಾಹನ ಶೋರೂಂಗಳು, ಸರ್ವೀಸ್ ಸೆಂಟರ್‌ಗಳು ಮತ್ತು ಗ್ಯಾರೇಜ್‌ಗಳಿಗೆ ಭಟ್ಕಳ ನಗರ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ನಾಯ್ಕ್ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.


ಪರಿಶೀಲನೆಯ ವೇಳೆ ಶೋರೂಂ ಹಾಗೂ ಗ್ಯಾರೇಜ್ ಮಾಲೀಕರು ಮತ್ತು ಸಿಬ್ಬಂದಿಗೆ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡಲಾಯಿತು. ಅತಿಯಾದ ಶಬ್ದ ಉಂಟುಮಾಡುವ ಮೋಡಿಫೈಡ್ ಸೈಲೆನ್ಸರ್‌ಗಳನ್ನು ಅಳವಡಿಸುವುದು, ವಾಹನಗಳಲ್ಲಿ ಅನಧಿಕೃತ ಬದಲಾವಣೆಗಳನ್ನು ಮಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಯಾವುದೇ ಕೆಲಸಗಳಲ್ಲಿ ತೊಡಗಬಾರದು ಎಂದು ಸೂಚಿಸಲಾಯಿತು.
ಒಂದು ವೇಳೆ ನಿಯಮ ಉಲ್ಲಂಘಿಸಿ ವಾಹನಗಳನ್ನು ಅನಧಿಕೃತವಾಗಿ ಮೋಡಿಫೈ (Modify) ಮಾಡಿಕೊಡುವುದು ಕಂಡುಬಂದಲ್ಲಿ, ಕೇವಲ ವಾಹನ ಸವಾರರಷ್ಟೇ ಅಲ್ಲದೆ ಸಂಬಂಧಪಟ್ಟ ಶೋರೂಂ, ಗ್ಯಾರೇಜ್ ಮಾಲೀಕರು ಹಾಗೂ ಸಿಬ್ಬಂದಿಯ ವಿರುದ್ಧವೂ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಸಾರ್ವಜನಿಕ ಶಾಂತಿ ಮತ್ತು ರಸ್ತೆ ಶಿಸ್ತಿಗಾಗಿ ನಿರಂತರ ಕಾರ್ಯಾಚರಣೆ:

    ಈ ಕುರಿತು ಮಾಹಿತಿ ನೀಡಿದ ಭಟ್ಕಳ ನಗರ ಪೊಲೀಸ್ ಠಾಣೆಯ (ಕಾನೂನು ಮತ್ತು ಸುವ್ಯವಸ್ಥೆ) ಪಿಎಸ್‌ಐ ನವೀನ್ ನಾಯ್ಕ್, “ಸಾರ್ವಜನಿಕರ ಸುರಕ್ಷತೆ, ರಸ್ತೆ ಶಿಸ್ತು ಪಾಲನೆ ಹಾಗೂ ಕರ್ಕಶ ಶಬ್ದದಿಂದ ಉಂಟಾಗುವ ಶಬ್ದ ಮಾಲಿನ್ಯ ನಿಯಂತ್ರಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಗ್ಯಾರೇಜ್ ಹಾಗೂ ರಸ್ತೆಗಳಲ್ಲಿ ಇಂತಹ ಪರಿಶೀಲನಾ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿಯಲಿವೆ,” ಎಂದು ಸ್ಪಷ್ಟಪಡಿಸಿದ್ದಾರೆ.

    About The Author

    error: Content is protected !!