September 11, 2026

ಹೆಣ್ಣಿನ ಮಾಂಗಲ್ಯದಲ್ಲಿ ಗಂಡನ ಜೀವ ಉಳಿಸುವ ಶಕ್ತಿಯಿದೆ: ಶಿರಸಿಯಲ್ಲಿ ಅರಿಶಿಣ ಕುಂಕುಮ ಕಾರ್ಯಕ್ರಮ

ಶಿರಸಿ: ಹೆಣ್ಣಿನ ಮಾಂಗಲ್ಯ ಹಾಗೂ ಅರಿಶಿಣ ಕುಂಕುಮದಲ್ಲಿ ಗಂಡನ ಜೀವವನ್ನು ಉಳಿಸುವ ಪವಿತ್ರ ಶಕ್ತಿಯಿದೆ. ಸಮಾಜದಲ್ಲಿ ಜಾತಿ ಭೇದಭಾವವಿಲ್ಲದೆ ನಾವೆಲ್ಲರೂ ಬಂಧುಗಳಂತೆ ಒಂದಾಗಿ ಬಾಳಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

ತಾಲೂಕಿನ ದೊಡ್ನಳ್ಳಿಯಲ್ಲಿ ಶ್ರಾವಣ ಮಾಸದ ಕೊನೆಯ ಶುಕ್ರವಾರದ ಅಂಗವಾಗಿ ಆಯೋಜಿಸಲಾಗಿದ್ದ ಅರಿಶಿಣ ಕುಂಕುಮ ಹಾಗೂ ಬಾಗಿನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅರಿಶಿಣ ಕುಂಕುಮದ ಮಹತ್ವ: ಮಹಿಳೆಯನ್ನು ನೆಲ ಮತ್ತು ಜಲಕ್ಕೆ ಹೋಲಿಸಿ ಪೂಜನೀಯ ಭಾವನೆಯಿಂದ ನೋಡಲಾಗುತ್ತದೆ. ಮಹಿಳೆಯರು ಸದೃಢವಾಗಿದ್ದಾಗ ಮಾತ್ರ ಕುಟುಂಬ ಮತ್ತು ಸಮಾಜ ಸುಂದರವಾಗಿರಲು ಸಾಧ್ಯ. ಕಾರ್ಯಕ್ರಮದಲ್ಲಿ ನೂರಾರು ತಾಯಂದಿರಿಗೆ ಅರಿಶಿಣ ಕುಂಕುಮ ಹಾಗೂ ಬಾಗಿನ ನೀಡಿ ಗೌರವಿಸಲಾಯಿತು.

ದೊಡ್ನಳ್ಳಿ ಪಂಚಾಯಿತಿ ಪಿಡಿಓ ಪ್ರೀತಿ ಶೆಟ್ಟಿ ಮಾತನಾಡಿ, ಅರಿಶಿಣ ಕುಂಕುಮ ಮತ್ತು ಹಸಿರು ಬಳೆ ನೀಡುವುದು ಮಹಿಳೆಯರಿಗೆ ಕೊಡುವ ಶ್ರೇಷ್ಠ ಗೌರವ ಹಾಗೂ ಇದು ಆರೋಗ್ಯಕ್ಕೂ ಹಿತಕರ ಎಂದರು. ಬಿಜೆಪಿ ಮುಖಂಡ ಶ್ರೀಪಾದ ಹೆಗಡೆ ಹಾಗೂ ನರೇಬೈಲ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಹೆಗಡೆ ಭಾರತೀಯ ಸಂಪ್ರದಾಯ ಮತ್ತು ಜಾನಪದ ಸಂಸ್ಕೃತಿಯಲ್ಲಿ ಅರಿಶಿಣ ಕುಂಕುಮಕ್ಕಿರುವ ಸ್ಥಾನಮಾನವನ್ನು ಸ್ಮರಿಸಿದರು.

    ಕಾರ್ಯಕ್ರಮದಲ್ಲಿ ಶಂಭು ಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪರಮೇಶ್ವರ ಭಟ್, ಪ್ರಮುಖರಾದ ಸುಬ್ರಾಯ ಹೆಗಡೆ, ಮಾಜಿ ಗ್ರಾ.ಪಂ. ಸದಸ್ಯೆ ಮೀನಾಕ್ಷಿ, ರಾಮಣ್ಣ ಜೋಗಿ, ವಿನಾಯಕ ಭಟ್, ಕಿರಣ ಕಾನಡೆ, ವೀರೇಂದ್ರ ಗೌಡ, ಶಿವಪ್ಪ ನಾಯ್ಕ, ಸಂತೋಷ ನಾಯ್ಕ್, ಸಚಿನ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಲಕ್ಷ್ಮೀ ಕಾನಡೆ ಕಾರ್ಯಕ್ರಮ ನಿರೂಪಿಸಿದರು.

    About The Author

    error: Content is protected !!