ಶಿರಸಿ: ಕಸ್ತೂರಿ ರಂಗನ್ ವರದಿಯ 7 ನೇ ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ 567 ಹಳ್ಳಿಗಳನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವುದು ಜನಜೀವನಕ್ಕೆ ಮಾರಕವಾಗಿದ್ದು, ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.
ಶಿರಸಿ ತಾಲೂಕಿನ ನಗರಸಭೆಯ ಬಯಲು ರಂಗಮಂದಿರದಲ್ಲಿ ‘ಒಂದು ಲಕ್ಷ ಆಕ್ಷೇಪ ಪತ್ರ ಅಭಿಯಾನ’ದ ಅಂಗವಾಗಿ ನಡೆದ ಬೃಹತ್ ಸಭೆಯಲ್ಲಿ ಈ ಕುರಿತು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಆಕ್ಷೇಪಣೆ ಹಾಗೂ ಆಗ್ರಹ: ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಮುಕ್ತಗೊಳಿಸಬೇಕು. ಕೇಂದ್ರ ಸರ್ಕಾರದ ಅಧಿಸೂಚನೆಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಲ್ಲಿ ಆಕ್ಷೇಪ ಸಲ್ಲಿಸಲು ರಾಜ್ಯ ಸರ್ಕಾರ ಅಧ್ಯಯನ ಸಮಿತಿ ರಚಿಸಬೇಕು. ಗ್ರಾಮ ಪಂಚಾಯತ್ಗಳ ಸೂಕ್ಷ್ಮ ಪ್ರದೇಶದ ನಿರ್ಣಯದೊಂದಿಗೆ ಸ್ಥಳೀಯ ವ್ಯವಸ್ಥೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕೆಂದು ಆಗ್ರಹಿಸಲಾಯಿತು.
ಆಕ್ಷೇಪ ಪತ್ರ ಸ್ವೀಕಾರ: ಸಭೆಯ ವೇದಿಕೆಗೆ ಆಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್ ಚೌಹಾಣ್ ಹಾಗೂ ನಗರಸಭೆ ಆಯುಕ್ತ ಪ್ರಕಾಶ್ ಅವರು ಸಾರ್ವಜನಿಕರಿಂದ ಬಂದಂತಹ ಆಕ್ಷೇಪಣಾ ಪತ್ರಗಳನ್ನು ಸ್ವೀಕರಿಸಿದರು. ಸಿಪಿಐ ಸಂಪತ್ ಕುಮಾರ್ ಉಪಸ್ಥಿತರಿದ್ದರು.

ತೀವ್ರ ಹೋರಾಟದ ನಿರ್ಣಯ: ವರದಿ ವಿರೋಧಿಸಿ ಜಿಲ್ಲಾದ್ಯಂತ ಗ್ರಾಮ ಪಂಚಾಯತ್ ಮಟ್ಟದಿಂದ ದೆಹಲಿಯವರೆಗೂ ಬೃಹತ್ ಹೋರಾಟ ಸಂಘಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಹಾಬಲೇಶ್ವರ ನಾಯ್ಕ ಬೇಡ್ಕಣಿ ಸ್ವಾಗತಿಸಿದರು. ಸಭೆಯಲ್ಲಿ ಶೋಭಾ ನಾಯ್ಕ, ಎಸ್. ಎಸ್. ಹೆಗಡೆ, ರಾಘು ಗುಡ್ನಾಪುರ, ಶ್ರೀಧರ ಹೆಗಡೆ, ನಾಗಪತಿ ಗೌಡ ಹುಕ್ಕಳ್ಳಿ, ಕಿರಣ ಮರಾರಿ ದೇವನಹಳ್ಳಿ, ಇಬ್ರಾಹಿಂ ಗೌಡಳ್ಳಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಕೆ. ಟಿ. ನಾಯ್ಕ, ರಾಜು ನರೇಬೈಲ್, ಅಣ್ಣಪ್ಪ ನಾಯ್ಕ ಕಣ್ಣಿಗೇರಿ, ಆರ್. ಟಿ. ನಾಯ್ಕ ವಾಜಗೋಡ, ಸ್ವಾತಿ ಜೈನ್, ಮಲ್ಲೇಶಿ, ಸತೀಶ್ ನಾಯ್ಕ ತ್ಯಾಗಲಿ, ಲಕ್ಷ್ಮಣ ನಾಯ್ಕ, ಕಲ್ಪನಾ ನರೇಬೈಲ್, ಯಶೋಧಾ ನೊಟೂರು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
About The Author


More Stories
ಶಿರಸಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ವರದಿ ತಿರಸ್ಕರಿಸಲು ಹಕ್ಕು ಒತ್ತಾಯ
ನದಿ ತಿರುವು ಯೋಜನಾ ವಿರೋಧಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ: ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಮದ್ದಲೆಯಲ್ಲಿ ನಂಬರ್ ೧ ಶಂಕರ ಭಾಗವತ್: ಉಮಾಕಾಂತ ಭಟ್ಟ ಕೆರೇಕೈ