September 22, 2026

ಭಟ್ಕಳದಲ್ಲಿ ಓಸಿ-ಮಟಕಾ ಜುಗಾರಾಟಕ್ಕೆ ಕಡಿವಾಣ: ಐವರ ವಿರುದ್ಧ ಪ್ರತ್ಯೇಕ ಪ್ರಕರಣ, ನಗದು ಜಪ್ತಿ

ಭಟ್ಕಳ: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಓಸಿ-ಮಟಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇರೆಗೆ ಭಟ್ಕಳ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗ್ರಾಮೀಣ ಠಾಣೆ ವ್ಯಾಪ್ತಿ ಕಾರ್ಯಾಚರಣೆ: ಹಡೀಲ್-ಸಬ್ಬತ್ತಿ ಪ್ರದೇಶದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅಂಕೆ-ಸಂಖ್ಯೆಗಳ ಆಧಾರದ ಮೇಲೆ ಜುಗಾರಾಟ ನಡೆಸುತ್ತಿದ್ದ ಕೂಲಿ ಕಾರ್ಮಿಕ ಪುಂಡಲೀಕ ಈರಪ್ಪ ನಾಯ್ಕ (42) ಎಂಬಾತನನ್ನು ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನಿಂದ ಓಸಿ ಚೀಟಿ, ಬಾಲ್‌ಪೆನ್ ಹಾಗೂ ₹210 ನಗದು ವಶಪಡಿಸಿಕೊಳ್ಳಲಾಗಿದೆ.

ನಗರ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಪ್ರಕರಣ: ಭಟ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ ದಾಳಿಯಲ್ಲಿ ತಲಾಂದದ ನಾಗರಾಜ ನಾರಾಯಣ ನಾಯ್ಕ (34), ಮೂಡಶಿರಾಲಿಯ ಉದಯ ನಾಗಪ್ಪ ನಾಯ್ಕ (32), ಜಾಲಿ ತಗ್ಗರಗೋಡದ ಮಂಜುನಾಥ ನಾರಾಯಣ ನಾಯ್ಕ (40) ಹಾಗೂ ಮಾವಿನಕುರ್ವೆ ಬೆಳೆಯ ಪ್ರಮೋದ ಗೋಯ್ದ ನಾಯ್ಕ (34) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸೊತ್ತು ವಶ ಹಾಗೂ ಪ್ರಕರಣ ದಾಖಲು: ಎಲ್ಲಾ ಐದು ಪ್ರತ್ಯೇಕ ಕಾರ್ಯಾಚರಣೆಗಳಿಂದ ಒಟ್ಟು ₹2,220 ನಗದು ಹಣ, ಓಸಿ ಚೀಟಿ ಹಾಗೂ ಪೆನ್ ಸೇರಿದಂತೆ ಜುಗಾರಾಟದ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಾಲೂಕಿನಲ್ಲಿ ಅಕ್ರಮ ಜುಗಾರಾಟ ತಡೆಯಲು ಕಟ್ಟುನಿಟ್ಟಿನ ಕ್ರಮ ಮುಂದುವರಿಸಿದ್ದಾರೆ.

About The Author

error: Content is protected !!