ಗೋಕರ್ಣ: ದೇಶಿ ಗೋವಿನ ತುಪ್ಪ ಹೃದಯಕ್ಕೆ ಅತ್ಯಂತ ಹಿತಕರವಾದದ್ದು. ಜರ್ಸಿ ದನದ ತುಪ್ಪ, ವನಸ್ಪತಿ ಹಾಗೂ ಕಲಬೆರಕೆ ತುಪ್ಪದ ಸೇವನೆಯಿಂದಾಗುವ ಅಡ್ಡಪರಿಣಾಮಗಳನ್ನು ದೇಶಿ ಗೋವಿನ ತುಪ್ಪಕ್ಕೂ ಆರೋಪಿಸಿ, ತುಪ್ಪ ಹಾನಿಕಾರಕ ಎಂದು ಹೇಳುವುದು ತಪ್ಪು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 20, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ತುಪ್ಪದ ಮಹತ್ವದ ಕುರಿತು ಅನುಗ್ರಹ ಪ್ರವಚನ ನೀಡಿದರು.
ತುಪ್ಪದ ಕುರಿತ ತಪ್ಪು ಕಲ್ಪನೆ: ತುಪ್ಪದಿಂದ ಕೊಬ್ಬು ಹೆಚ್ಚಾಗುತ್ತದೆ ಎಂಬ ಅಪಪ್ರಚಾರದಿಂದಾಗಿ ಕೋಟ್ಯಂತರ ಜನರು ತುಪ್ಪದಿಂದ ದೂರ ಉಳಿದಿದ್ದಾರೆ. ಗೋವಿನ ವರ್ಣಸಂಕರ ಮತ್ತು ತುಪ್ಪದ ಕಲಬೆರಕೆ ಬಹುದೊಡ್ಡ ಅಪಚಾರವಾಗಿದ್ದು, ಸಮಾಜ ಈ ಕುರಿತು ಎಚ್ಚೆತ್ತುಕೊಳ್ಳಬೇಕು. ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆ ತೆಗೆದು ಪಾರಂಪರಿಕವಾಗಿ ತಯಾರಿಸಿದ ತುಪ್ಪವೇ ನಿಜವಾದ ತುಪ್ಪ. ಹಾಲಿನ ಕೆನೆಯನ್ನು ಫ್ರಿಡ್ಜ್‌ನಲ್ಲಿಟ್ಟು ನೇರವಾಗಿ ಮಾಡುವ ತುಪ್ಪ ಸರಿಯಾದ ಕ್ರಮವಲ್ಲ.
ಆಯುಷ್ಯ ಹಾಗೂ ಬುದ್ಧಿ ವರ್ಧಕ: ವೇದ ವಾಙ್ಮಯಗಳಲ್ಲಿ ಅತ್ಯಂತ ಹೆಚ್ಚು ಉಲ್ಲೇಖಗೊಂಡಿರುವ ತುಪ್ಪವು ಜಠರಾಗ್ನಿ ಮತ್ತು ಬುದ್ಧಿಯನ್ನು ವೃದ್ಧಿಸುತ್ತದೆ. ಶ್ರೀ ಶಂಕರಾಚಾರ್ಯರು ತಮ್ಮ ಕೃತಿಗಳಲ್ಲಿ ‘ತುಪ್ಪವೇ ಆಯುಸ್ಸು’ ಎಂದು ಬರೆದಿದ್ದಾರೆ. ಗೃಹಸ್ಥನಾದವನು ತುಪ್ಪವಿಲ್ಲದೆ ಊಟ ಸ್ವೀಕರಿಸಬಾರದು ಎಂಬ ನಿಯಮವಿದೆ.

ಮಂಗಲ ದ್ರವ್ಯ ತುಪ್ಪ: ಭಾಗವತದಲ್ಲಿ ಶ್ರೀಕೃಷ್ಣನು ಪ್ರಾತಃಕಾಲದಲ್ಲಿ ತುಪ್ಪದಲ್ಲಿ ಮುಖ ನೋಡಿಕೊಳ್ಳುತ್ತಿದ್ದ ಉಲ್ಲೇಖವಿದೆ. ಮುಂಜಾನೆ ತುಪ್ಪದ ದರ್ಶನವು ಮಂಗಲಕರ ಹಾಗೂ ಮನಸ್ಸಿಗೆ ಸತ್ವಗುಣವನ್ನು ನೀಡುತ್ತದೆ.
ಸ್ವರ್ಣಪಾದುಕಾ ಪೂಜೆ ಹಾಗೂ ಉಪಸ್ಥಿತಿ: ಶ್ರೀಮಠದ ಪಾರಂಪರಿಕ ಶ್ರದ್ಧಾಳುಗಳಾದ ದೇಶಭಂಡಾರಿ ಸಮಾಜದ ವತಿಯಿಂದ ಬಾಬು ಭಂಡಾರಿ ಹಾಗೂ ಸಮಾಜದ ಪ್ರಮುಖರ ನೇತೃತ್ವದಲ್ಲಿ ಗುರುಪರಂಪರೆಗೆ ‘ಸ್ವರ್ಣಪಾದುಕಾ ಪೂಜೆ’ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು, ದಾವಣಗೆರೆ, ಹರಿಹರ ಹವ್ಯಕ ವಲಯಗಳ ಪರವಾಗಿ ಶಂಕರನಾರಾಯಣ ಶಾಸ್ತ್ರಿ ಗುರುಭಿಕ್ಷಾಸೇವೆ ಸಮರ್ಪಿಸಿದರು. ಪ್ರಮುಖರಾದ ರಾಧೇಶ್ಯಾಮ್ ಅಗರ್ವಾಲ್, ಮುಂಟು ಅಗರ್ವಾಲ್, ಅರುಣ್ ಹೆಗಡೆ, ಡಾ. ಎಸ್. ಆರ್. ಹೆಗಡೆ, ಗೋಕರ್ಣ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಹಾಗೂ ದಿನಪ್ರಧಾನರಾಗಿ ನಾಗರಾಜ ಪೆದಮಲೆ ದಂಪತಿಗಳು ಉಪಸ್ಥಿತರಿದ್ದು ಆಶೀರ್ವಾದ ಪಡೆದರು.
About The Author


More Stories
ಅರಿವಿನ ಬದುಕಿಗೆ ದೇಸಿ ಗೋವಿನ ತುಪ್ಪ ಅಗತ್ಯ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಬಾಯಾರಿದವರಿಗೆ ನೀರು ನೀಡುವುದು ಶ್ರೇಷ್ಠ ಯಜ್ಞ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಉಷಃಪಾನ ಹಾಗೂ ನಾಸಾಪಾನದಿಂದ ಶತಾಯುಷಿ ಜೀವನ ಸಾಧ್ಯ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ