September 22, 2026

ಭಟ್ಕಳದ ಎಐಟಿಎಂನಲ್ಲಿ ‘ಐಓಟಿ ಕ್ಲಬ್’ ಉದ್ಘಾಟನೆ: ಆಟೋಮೋಟಿವ್ ಐಓಟಿ ವೆಬಿನಾರ್ ಹಾಗೂ ಕಾರ್ಯಾಗಾರ

ಭಟ್ಕಳ: ಇಲ್ಲಿನ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM) ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ನೂತನ ‘ಐಓಟಿ ಕ್ಲಬ್’ (IoT Club) ಉದ್ಘಾಟಿಸಲಾಯಿತು. ಉದ್ಘಾಟನೆಯ ಅಂಗವಾಗಿ “ಆಟೋಮೋಟಿವ್ ಕ್ಷೇತ್ರದಲ್ಲಿ ಐಓಟಿ” ಕುರಿತು ವೆಬಿನಾರ್ ಹಾಗೂ ‘ಆರ್ಡ್ವಿನೊ 101’ ಪ್ರಾಯೋಗಿಕ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಬ್ಲೂ (BLUE) ಸಂಸ್ಥೆಯ ಏಐ ಆರ್ಕಿಟೆಕ್ಟ್ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ನಿಹಾಲ್ ಸುರೇಶ ನಾಯ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಇಂದಿನ ತಂತ್ರಜ್ಞಾನ ರಂಗದಲ್ಲಿ AI ಮತ್ತು IoT ಯ ಪ್ರಾಮುಖ್ಯತೆ ಕುರಿತು ವಿವರಿಸಿ, ವಿದ್ಯಾರ್ಥಿಗಳು ಅಭ್ಯಾಸದ ಹಂತದಲ್ಲೇ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.

ಜರ್ಮನಿಯಿಂದ ಜಾಗತಿಕ ತಜ್ಞರ ಉಪನ್ಯಾಸ: ಜರ್ಮನಿಯ ‘ಎಕ್ಸಲೆರಾ ಬೈ ಕಮ್ಮಿನ್ಸ್’ ಸಂಸ್ಥೆಯ ಪ್ರಾಡಕ್ಟ್ ಎಂಜಿನಿಯರ್ ಅಶ್ಫಾಕ್ ಅಹಮದ್ ಜರ್ಮನಿಯಿಂದಲೇ ವೆಬಿನಾರ್ ಮೂಲಕ ಭಾಗವಹಿಸಿ, ಐಓಟಿ ತಂತ್ರಜ್ಞಾನವು ಆಟೋಮೋಟಿವ್ ರಂಗದಲ್ಲಿ ತರುತ್ತಿರುವ ಕ್ರಾಂತಿಕಾರಿ ಬದಲಾವಣೆಗಳು ಹಾಗೂ ಜಾಗತಿಕ ಉದ್ಯಮದ ಅವಕಾಶಗಳ ಕುರಿತು ಉಪನ್ಯಾಸ ನೀಡಿದರು.

ಪ್ರಾಯೋಗಿಕ ಕಾರ್ಯಾಗಾರ ಹಾಗೂ ಭವಿಷ್ಯದ ಯೋಜನೆ: ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ನಡೆಸಿಕೊಟ್ಟ ‘ಆರ್ಡ್ವಿನೊ 101’ ಕಾರ್ಯಾಗಾರದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಮೈಕ್ರೋಕಂಟ್ರೋಲರ್‌ಗಳು, ಸರ್ಕ್ಯೂಟ್ ಬಿಲ್ಡಿಂಗ್ ಹಾಗೂ ಸೆನ್ಸರ್‌ಗಳ ಕುರಿತು ಪ್ರಾಯೋಗಿಕ ತರಬೇತಿ ಪಡೆದರು. ‘ಸ್ಮಾರ್ಟ್ ಕ್ಯಾಂಪಸ್’ ಯೋಜನೆಯಡಿ ಮುಂದಿನ ದಿನಗಳಲ್ಲಿ ಹ್ಯಾಕಥಾನ್, ಉಪನ್ಯಾಸಗಳು ಹಾಗೂ ತಾಂತ್ರಿಕ ಸ್ಪರ್ಧೆಗಳನ್ನು ನಡೆಸುವ ಗುರಿಯನ್ನು ಕ್ಲಬ್ ಹೊಂದಿದೆ.

    ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಕೆ. ಫಜ್ಲೂರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಹಸನ್ ಖರುರಿ, ವಿಭಾಗೀಯ ಮುಖ್ಯಸ್ಥ ಡಾ. ಕಿರಣ್ ವಿ. ಶಾನಭಾಗ್, ಸಂಯೋಜಕ ಪ್ರೊ. ಶ್ರೀಶೈಲ್ ಭಟ್ ಹಾಗೂ ಐಒಟಿ ಕ್ಲಬ್ ವಿದ್ಯಾರ್ಥಿ ಅಧ್ಯಕ್ಷ ಸಲ್ಸಬೀಲ್ ಕೊಬಟ್ಟೆ, ‘ಟೆಕ್ನೋವೇಟ್’ ಅಧ್ಯಕ್ಷ ಮೊಹಮ್ಮದ್ ಸಾಯೀಮ್ ಚಂಪಾ ಸೇರಿದಂತೆ ವಿದ್ಯಾರ್ಥಿ ಸಮಿತಿ ಉಪಸ್ಥಿತರಿದ್ದರು.

    About The Author

    error: Content is protected !!