September 22, 2026

ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘಕ್ಕೆ ₹2.74 ಕೋಟಿ ಲಾಭ: 12% ಲಾಭಾಂಶ ಘೋಷಣೆ

ಭಟ್ಕಳ: ಇಲ್ಲಿನ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ 27ನೇ ವಾರ್ಷಿಕ ಮಹಾಸಭೆಯು ಸಂಸ್ಥೆಯ ಶ್ರೀ ಮಾರುತಿ ಸಭಾಂಗಣದಲ್ಲಿ ಸೆಪ್ಟೆಂಬರ್ 20ರಂದು ಜರುಗಿತು. ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಶೋಕ ಪೈ, ಸಂಘವು ಆರ್ಥಿಕವಾಗಿ ಸುಧೃಡವಾಗಿದ್ದು, ಸದಸ್ಯರಿಗೆ ಶೇಕಡಾ 12ರಷ್ಟು ಲಾಭಾಂಶ (ಡಿವಿಡೆಂಡ್) ಘೋಷಿಸಿದರು.

ಠೇವಣಿ ಮತ್ತು ಸಾಲ: ಪ್ರಸಕ್ತ ಸಾಲಿನಲ್ಲಿ ಸಂಘವು ₹128 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದ್ದು, ಸದಸ್ಯರಿಗೆ ₹109 ಕೋಟಿಗೂ ಅಧಿಕ ಸಾಲ ನೀಡಿದೆ.

ಸಾಲ ವಸೂಲಾತಿ ಹಾಗೂ ಲಾಭ: ಶೇಕಡಾ 98.50ರಷ್ಟು ಸಾಲ ವಸೂಲಾತಿಯೊಂದಿಗೆ ಸಂಘವು ಸುಮಾರು ₹2.74 ಕೋಟಿಗೂ ಮಿಕ್ಕಿ ನಿವ್ವಳ ಲಾಭ ಗಳಿಸಿದೆ.

ಲೆಕ್ಕ ಪರಿಶೋಧನೆ: ಸಂಘವು ಸತತ 15 ವರ್ಷಗಳಿಂದ ಲೆಕ್ಕ ಪರಿಶೋಧನೆಯಲ್ಲಿ ‘ಎ’ ದರ್ಜೆ (Audit Grade ‘A’) ಪಡೆದುಕೊಂಡು ಬರುತ್ತಿದೆ.

ಪ್ರತಿಭಾ ಪುರಸ್ಕಾರ ಹಾಗೂ ಸ್ವಂತ ಕಟ್ಟಡ: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಪೂರ್ಣ ಪಾರದರ್ಶಕವಾಗಿ ನೂತನ ಸ್ವಂತ ಕಟ್ಟಡ ನಿರ್ಮಾಣವಾಗಿದ್ದು, ಎರಡು ಬಾರಿ ಶ್ರೀಗಳ ಪಾದಸ್ಪರ್ಶವಾಗಿದೆ ಎಂದು ಅಧ್ಯಕ್ಷರು ಸ್ಮರಿಸಿದರು.

ನಿರ್ದೇಶಕ ನರೇಂದ್ರ ನಾಯಕ್ ಮಾತನಾಡಿ, ಸಂಘದ ಪ್ರಗತಿಗೆ ಅಧ್ಯಕ್ಷರ ಶ್ರಮ ಹಾಗೂ ಗ್ರಾಹಕರ ಸಹಕಾರ ಕಾರಣ ಎಂದರು. ಸಂಘದ ಸದಸ್ಯರಾದ ಎ. ಎಮ್. ಮುಲ್ಲಾ, ಮಂಜುನಾಥ ಪ್ರಭು, ಶ್ರೀನಿವಾಸ ಮಹಾಲೆ ಅವರು ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಹಾಗೂ ಸಿಬ್ಬಂದಿಗಳ ಶ್ರಮವನ್ನು ಶ್ಲಾಘಿಸಿದರು.

    ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಶ್ಯಾನಭಾಗ ವರದಿ ವಾಚಿಸಿದರು. ನಿರ್ದೇಶಕ ಅನಂತ ಕಾಮತ್ ಸ್ವಾಗತಿಸಿದರು, ವಾಮನ ಕಾಮತ್ ವಂದಿಸಿದರು. ಸಿಬ್ಬಂದಿ ಶ್ಯಾಮಸುಂದರ ಪ್ರಭು ಪ್ರಾರ್ಥಿಸಿದರು. ಭಟ್ಕಳ ಶಾಖೆಯ ಪ್ರಬಂಧಕ ಪ್ರಸನ್ನ ಪ್ರಭು ಸಭಾ ಕಾರ್ಯಕಲಾಪಗಳನ್ನು ನಿರ್ವಹಿಸಿದರು.

    About The Author

    error: Content is protected !!